ಕನ್ನಡಪ್ರಭ ವಾರ್ತೆ ಕೋಲಾರಈ ವರ್ಷ ಕೋಲಾರ ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಪರಿಣಾಮ ಬಹುತೇಕ ಎಲ್ಲಾ ಕೆರೆಗಳು ತುಂಬಿಕೊಂಡಿವೆ. ಅಂತರಜಲ ಮಟ್ಟವೂ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಕೆರೆಗಳ ನೀರು ಕೆಳಭಾಗದ ಇಳಿಜಾರು ಪ್ರದೇಶಗಳಿಗೆ ಕಳೆದ ೨೦ ವರ್ಷದಿಂದ ಹರಿಯದಿರುವ ಕಾರಣ ಕೃಷಿ ಭೂಮಿಗೆ ನೀರು ಸಿಗುತ್ತಿಲ್ಲ.ಇದಕ್ಕೆ ಮುಖ್ಯ ಕಾರಣ ಸಣ್ಣ ನೀರಾವರಿ ಇಲಾಖೆಯ ಅಸಮರ್ಪಕ ನಿರ್ವಹಣೆ ಹಾಗೂ ಯೋಜಿತ ನೀರಾವರಿ ವ್ಯವಸ್ಥೆ. ನೀರು ಕೆರೆಗಳಲ್ಲಿ ಸಂಗ್ರಹವಾಗಿದ್ದರೂ ಕೆರೆ ಕೆಳಗಿನ ಜಮೀನುಗಲಿಗೆ ಹರಿಯುವುದೇ ಇಲ್ಲ. ಇದರಿಂದ ಕೆರೆಯ ಕೆಳಭಾಗದ ಸಾವಿರಾರು ಎಕರೆ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಬಹುತೇಕ ಸ್ಥಗಿತವಾಗಿದೆ. ಜಿಲ್ಲೆಯಲ್ಲಿ ೨೫೦೦ಕ್ಕೂ ಹೆಚ್ಚು ಕೆರೆ
ಎತ್ತರ ಪ್ರದೇಶದ ಜಮೀನುಗಳಲ್ಲಿ ವ್ಯವಸಾಯ ಮಾಡಲು ಹೆಚ್ಚಿನ ಬಂಡವಾಳದ ಅಗತ್ಯವಿದ್ದು, ಅದರ ಕೊರತೆಯಿಂದ ಅನೇಕ ರೈತರು ತಮ್ಮ ಊರನ್ನು ಬಿಟ್ಟು ಬೆಂಗಳೂರಿನಂತಹ ಮಹಾನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಹೀಗಾಗಿ, ಗ್ರಾಮೀಣ ಆರ್ಥಿಕ ಚಟುವಟಿಕೆಗಳು ಕುಗ್ಗುತ್ತಿದ್ದು, ಸ್ಥಳೀಯ ಉದ್ಯೋಗಾವಕಾಶಗಳು ಕ್ಷೀಣಿಸುತ್ತಿವೆ.ಇದೇ ಸ್ಥಿತಿ ಕೋಲಾರ ಜಿಲ್ಲೆಯಲ್ಲಿ ಮುಂದುವರಿದರೆ ಜಿಲ್ಲೆಯಲ್ಲಿ ಕೃಷಿಕರೇ ಇಲ್ಲದಂತ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಸರ್ಕಾರ ಕೆರೆಯ ನೀರನ್ನು ರೈತರ ಹೊಲಗಳಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರೆ ಕೃಷಿಗೆ ಜೀವ ಬಂದಂತಾಗುತ್ತದೆ. ಕೆರೆ ಮತ್ತು ಕಾಲುವೆಗಳ ಹೂಳನ್ನು ತೆರವುಗೊಳಿ ಸಣ್ಣ ನೀರಾವರಿ ಇಲಾಖೆ ಮತ್ತು ಕೃಷಿ ಇಲಾಖೆ ವೈಜ್ಞಾನಿಕ ನೀರಾವರಿ ಯೋಜನೆ ರೂಪಿಸಿ, ಕೆರೆಗಳ ನಿರ್ವಹಣೆಗೆ ಸ್ಥಳೀಯ ಸಮಿತಿಗಳನ್ನು ಬಲಪಡಿಸಬೇಕೆಂಬುದು ರೈತರ ಆಗ್ರಹವಾಗಿದೆ.
ಕೆರೆಗಳು ಆರ್ಥಿಕ ಜೀವನಾಡಿಈ ಕುರಿತು ಪರಿಸರ ತಜ್ಞರು ಹೇಳುವಂತೆ, ಕೋಲಾರದ ಕೆರೆಗಳು ಕೇವಲ ನೀರಿನ ಸಂಗ್ರಹಣೆ ಕೇಂದ್ರಗಳಷ್ಟೇ ಅಲ್ಲ. ಅವು ಆರ್ಥಿಕ ಜೀವನಾಡಿಯಂತಿವೆ. ಕೆರೆ ನೀರಿನ ಸರಿಯಾದ ಹರಿವು, ಮೀನುಗಾರಿಕೆ ಮತ್ತು ಕೃಷಿ ಪುನರುಜ್ಜೀವನಕ್ಕೆ ಕ್ರಮ ಕೈಗೊಂಡರೆ ರೈತರ ಬದುಕು ಹಸನಾಗಲಿದೆ. ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿರುವ ಕೋಡಿಕಣ್ಣೂರು ಕೆರೆಗೆ ನೀರು ಬಂದಿದ್ದರೂ ಜೊಂಡು ಸಸ್ಯಗಳು ಬೆಳೆಯುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಸಾರ್ವಜನಿಕರ ಉಪಯೋಗಬಾರದಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಕೋಲಾರ ನಗರದ ಪ್ರದೇಶದ ಮಾಂಸದ ಅಂಗಡಿ ಮಾಲೀಕರು ಸತ್ತ ಪ್ರಾಣಿಗಳ ತ್ಯಾಜ್ಯ ಮಾಂಸವನ್ನು ಕೆರೆಯಂಗಳದಲ್ಲಿ ಸುರಿಯುವುದರಿಂದ ಮಳೆಯಿಂದ ಕೆರೆಗೆ ಬಂದಿರುವ ಅಲ್ಪಸ್ವಲ್ಪ ನೀರು ಸಹ ಕಲುಷಿತವಾಗುತ್ತಿದೆ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.