ಕಾಳಿನದಿ ಇದ್ದರೂ ಜನರಿಗೆ ತಪ್ಪದ ನೀರಿನ ಗೋಳು

KannadaprabhaNewsNetwork |  
Published : Mar 15, 2026, 02:30 AM IST
ಹಳಿಯಾಳ ಮರಾಠ ಭವನದಲ್ಲಿ ಕಬ್ಬು ಬೆಳೆಗಾರರು ಹಾಗೂ ರೈತರು ಸುದ್ದಿಗೋಷ್ಠಿ ನಡೆಯಿತು. | Kannada Prabha

ಸಾರಾಂಶ

ಹಳಿಯಾಳ ತಾಲೂಕಿನಲ್ಲಿ 113 ಗ್ರಾಮಗಳಿದ್ದು, ಅದರಲ್ಲಿ 116 ಕೆರೆಗಳಿವೆ. ಹೀಗಿರುವಾಗ ಕಾಳಿನದಿ ನೀರಾವರಿ ಯೋಜನೆಯಲ್ಲಿ ಕೇವಲ 46 ಕೆರೆಗಳಿಗೆ ಹಾಗೂ 19 ಬಾಂದಾರುಗಳಿಗೆ ಮಾತ್ರ ನೀರನ್ನು ತುಂಬಿಸಲಾಗುತ್ತಿದೆ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಹೇಳಿದರು.

ಹಳಿಯಾಳ: ತಾಲೂಕಿನಿಂದ 20 ಕಿಮೀ ಅಂಚಿನಲ್ಲಿ ಸರ್ವಋತುದಲ್ಲಿಯೂ ತುಂಬಿ ಹರಿಯುವ ಕಾಳಿ ನದಿ ಇದ್ದರೂ ಹಳಿಯಾಳ ತಾಲೂಕಿನ ಜನರಿಗೆ ಕುಡಿಯುವ ನೀರಿಗಾಗಿ ಕಣ್ಣೀರು ಹರಿಸುವ ಗೋಳು ತಪ್ಪಲಿಲ್ಲ. ಸ್ಥಳೀಯ ಶಾಸಕರು ಈ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಹಳಿಯಾಳ ತಾಲೂಕು ಕಬ್ಬು ಬೆಳೆಗಾರರು ಹಾಗೂ ರೈತರು ಆಗ್ರಹಿಸಿದ್ದಾರೆ.

ಶುಕ್ರವಾರ ರೈತರು ಹಾಗೂ ಕಬ್ಬು ಬೆಳೆಗಾರರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ, ಇಡೀ ತಾಲೂಕು ನೀರಿಗಾಗಿ ಪರಿತಪಿಸುತ್ತಿದೆ, ಆದರೆ ಇಲ್ಲಿನ ಜನಪ್ರತಿನಿಧಿಗಳಿಗೆ ಆ ನೋವಿನ ಅರಿವು ಆಗುತ್ತಿಲ್ಲ ಖೇದ ವ್ಯಕ್ತಪಡಿಸಿದರು. ಸಾಕಷ್ಟು ಕೆರೆಗಳಿಗೆ ನೀರು ಬರಲ್ಲ: ತಾಲೂಕಿನಲ್ಲಿ 113 ಗ್ರಾಮಗಳಿದ್ದು, ಅದರಲ್ಲಿ 116 ಕೆರೆಗಳಿವೆ. ಹೀಗಿರುವಾಗ ಕಾಳಿನದಿ ನೀರಾವರಿ ಯೋಜನೆಯಲ್ಲಿ ಕೇವಲ 46 ಕೆರೆಗಳಿಗೆ ಹಾಗೂ 19 ಬಾಂದಾರುಗಳಿಗೆ ಮಾತ್ರ ನೀರನ್ನು ತುಂಬಿಸಲಾಗುತ್ತಿದೆ, ಇನ್ನುಳಿದ 70ಕ್ಕೂ ಹೆಚ್ಚು ಕೆರೆಗಳ ಗತಿಯೇನು? ಹೀಗಾದರೆ ಹಳಿಯಾಳದಲ್ಲಿ ನೀರಾವರಿ ಆಗುವುದು ಹೇಗೆ ಎಂದು ಪ್ರಶ್ನಿಸಿದ ಜಿವೋಜಿ, ಈ ಪ್ರಶ್ನೆಗಳಿಗೆ ಶಾಸಕರ ಬಳಿಯೂ ಉತ್ತರವಿಲ್ಲ, ಇಲ್ಲಿನ ಅಧಿಕಾರಿ ವರ್ಗದ ಬಳಿಯೂ ಸಮರ್ಪಕ ಉತ್ತರವಿಲ್ಲ ಎಂದು ಆರೋಪಿಸಿದರು.

ನಾವೇನೂ ದಡ್ಡರಲ್ಲ: ಹಳಿಯಾಳ ಕ್ಷೇತ್ರದಲ್ಲಿ ಮಂಜೂರಾದ ಯಾವೊಂದು ಯೋಜನೆಗಳೂ ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳದೇ ಇರುವುದರ ಹಿಂದಿನ ಮರ್ಮವೇನು ಎಂಬುದನ್ನು ಅರಿಯದಷ್ಟು ತಾಲೂಕಿನ ಜನತೆ, ರೈತ ಸಮುದಾಯವು ದಡ್ಡರಾಗಿಲ್ಲ. ರೈತರಿಗೆ ಅವಕಾಶ ಕೊಟ್ಟರೆ ಒಂದೇ ವರ್ಷದಲ್ಲಿ ಡಿಪಿಆರ್‌ನಂತೆ ಕೆಲಸ ಮುಕ್ತಾಯಗೊಳಿಸಿ ಕೊಡಲು ನಾವು ಸಿದ್ಧರಿದ್ದೇವೆ, ಈ ನಮ್ಮ ಸವಾಲಾನ್ನು ಸ್ವೀಕರಿಸಲು ಸಿದ್ಧರಿದ್ದಾರಾ ಶಾಸಕರೇ ಎಂದು ಸವಾಲೆಸೆದರು.

ನೀರಿನ ವಿಷಯದಲ್ಲೂ ಷಡ್ಯಂತ್ರ ಬೇಡ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಸಂದೀಪಕುಮಾರ ಬೊಬಾಟೆ ಮಾತನಾಡಿ, ಕಾಳಿನದಿ ನೀರಾವರಿ ಯೋಜನೆ ಸಮಸ್ತ ತಾಲೂಕಿಗೆ ಬೇಕಾದ ಯೋಜನೆಯಾಗಿದೆ. ರಾಜಕೀಯ ತಂತ್ರ ಬಿಟ್ಟು ಕೆರೆಗಳಿಗೆ ನೀರು ಹರಿಸುವ ಕಾರ್ಯವನ್ನು ಶಾಸಕರು ಮಾಡಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ರಾಜ್ಯ ಪ್ರಮುಖರಾದ ಎಂ.ವಿ. ಘಾಢಿ ಮಾತನಾಡಿ, ಕಾಳಿನದಿ ನೀರಾವರಿ ಯೋಜನೆ ಶೀಘ್ರ ಜಾರಿಗೊಳ್ಳದಿದ್ದರೆ ಹೋರಾಟ ಖಚಿತ ಎಂದು ಎಚ್ಚರಿಸಿದರು.

ರೈತ ಪ್ರಮುಖರಾದ ರಾಮದಾಸ ಬೆಳಗಾಂವಕರ, ಸಾತೇರಿ ಗೋಡೆಮನಿ, ಸುರೇಶ ಶಿವಣ್ಣನವರ ಹಾಗೂ ಹಲವಾರು ರೈತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಕಾರವಾರದಲ್ಲಿ ‘ಯುನಿಟಿ ರನ್ ಆ್ಯಂಡ್ ರೈಡ್’
ಧಾರ್ಮಿಕ ಆಚರಣೆಗಳಲ್ಲಿ ಆರೋಗ್ಯ, ಏಕತೆ ಸಂದೇಶ ಅಡಗಿದೆ: ಸಂಗನಗೌಡ ಜಿ. ಪಾಟೀಲ್