ಹುಟ್ಟುವ ಪ್ರತಿ ಮಗುವು ವಿಶ್ವಮಾನವ

KannadaprabhaNewsNetwork |  
Published : Dec 31, 2024, 01:01 AM IST
ಪೊಟೋ-ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ವಿಶ್ವಮಾನವ ಕುವೆಂಪು ಅವರ ಜನ್ಮ ದಿನಾಚರಣೆ ಆಚರಿಸಿ ಯರಗುಪ್ಪಿ ಮಾತನಾಡಿದರು.  | Kannada Prabha

ಸಾರಾಂಶ

ಕುವೆಂಪು ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆ ನೀಡಿ ಹೊಸಗನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ

ಲಕ್ಷ್ಮೇಶ್ವರ: ಮನುಜ ಮತ ವಿಶ್ವಪಥ ಎನ್ನುವ ಸಂದೇಶ ಸಾರಿದ ಶ್ರೇಷ್ಠ ವಿಶ್ವಮಾನವ, ರಸ ಋಷಿ ಕುವೆಂಪು.ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಮತ್ತು ಆದರ್ಶ ಸಾರ್ವಕಾಲಿಕವಾಗಿವೆ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಎಂ. ಯರಗುಪ್ಪಿ ಹೇಳಿದರು.

ಸೋಮವಾರ ಪಟ್ಟಣದ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 120ನೇ ಜನ್ಮದಿನದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕುವೆಂಪು ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆ ನೀಡಿ ಹೊಸಗನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ. ಅಂತಹ ಮಹಾನ್ ಚೇತನ ಕುವೆಂಪು ಅವರ ವಿಶ್ವಮಾನವ ಸಂದೇಶ ಕುರಿತು ಶಾಲೆಗಳಲ್ಲಿ ಅನೇಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರ ಜನ್ಮ ದಿನಾಚರಣೆ ರಾಜ್ಯ ಸರ್ಕಾರವು 2015 ರಿಂದ ವಿಶ್ವ ಮಾನವ ದಿನಾಚರಣೆಯನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ ಅವರು, ಪ್ರತಿ ಮಗುವೂ ಹುಟ್ಟುತ್ತಲೇ ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ ವಿಶ್ವಮಾನವನಾಗಿಯೇ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಜಾತಿ, ಮತ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ.ಅವೆಲ್ಲವುಗಳಿಂದ ಪಾರಾಗಿ ಅವನನ್ನು ಬುದ್ಧನನ್ನಾಗಿ, ಅಂದರೆ ವಿಶ್ವಮಾನವನನ್ನಾಗಿ, ಪರಿವರ್ತಿಸುವುದೆ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ, ಪ್ರಪಂಚದ ಮಕ್ಕಳೆಲ್ಲ ಅನಿಕೇತನರಾಗಬೇಕು ಎಂದು ಕುವೆಂಪು ಹೇಳಿದ್ದು ಅಕ್ಷರಶಃ ಸತ್ಯವಾದ ಮಾತು ಎಂದರು.

ಕುವೆಂಪು ಅವರು ರಚಿಸಿದ ನಾಡಗೀತೆಯನ್ನು ಶಾಲಾ ಅವಧಿಯ ಪ್ರಾರ್ಥನಾ ಸಮಯದಲ್ಲಿ ಹಾಡಿ ಅವರನ್ನು ಪ್ರತಿ ದಿನ ಸ್ಮರಿಸಲಾಗುತ್ತದೆ. ಕನ್ನಡ ಸಾಹಿತ್ಯಕ್ಕೆ ನೀಡಿದ ಅಮೂಲ್ಯ ಕೊಡುಗೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವ ಕುವೆಂಪು ಅವರ ಕವಿತೆಗಳು ಎತ್ತಿ ತೋರಿಸುತ್ತವೆ ಎಂದು ಲಕ್ಷ್ಮೇಶ್ವರ ದಕ್ಷಿಣ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಸತೀಶ ಬೋಮಲೆ ಹೇಳಿದರು.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಬೀಸುಗಾಳಿಗೆ ಬೀಳು ತೇಲುವ ತೆರೆಯ ಮೇಗಡೆ ಹಾರಲಿ ಎಂದು ಕುವೆಂಪು ಅವರು ಮಕ್ಕಳಿಗೆ ಹಾಗೂ ನಾಡಿಗೆ ಹತ್ತಿರ ಇರುವ ಕವಿತೆ ರಚಿಸಿ ಜನ ಮಾನಸದಲ್ಲಿ ಇದ್ದಾರೆ ಹಾಗೂ ಕನ್ನಡ ಸಾಹಿತ್ಯಕ್ಕೆ ಅಗಾಧ ಸೇವೆ ಕನ್ನಡ ನಾಡಿನಲ್ಲಿ ಅಜರಾಮರ. ಪರಿಸರ ಸಂರಕ್ಷಿಸುವ ಮಹತ್ವ ಹೇಳಿಕೊಟ್ಟ ಮತ್ತು ಪ್ರಕೃತಿಗೆ ಸಂಬಂಧಿಸಿದಂತೆ ಅವರ ಶಕ್ತಿಯುತ ಕವಿತೆ ಇಂದು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಶಾಲಾ ಪ್ರಧಾನ ಶಿಕ್ಷಕ ಬಸವರಾಜ ಎಂ.ಕುಂಬಾರ ಹೇಳಿದರು.

ಈ ವೇಳೆ ಶಿಕ್ಷಕಿ ಎಚ್.ಡಿ.ನಿಂಗರಡ್ಡಿ, ಆರ್.ಎಂ. ಶಿರಹಟ್ಟಿ, ಆರ್.ಕೆ. ಉಪನಾಳ, ಅಕ್ಷತಾ ಕಾಟೆಗಾರ, ಎನ್.ಟಿ.ಸಿ ಪ್ರಶಿಕ್ಷಣಾರ್ಥಿಗಳು ಹಾಗೂ ಮುದ್ದು ಮಕ್ಕಳು ಹಾಜರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ