- ಚಿಕ್ಕಮಗಳೂರಿನ ಜಿಪಂನಲ್ಲಿ ಶಿಶು ಕೇಂದ್ರಿತ ವಿಷಯಗಳ ಕುರಿತು ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿರುವ ಬಾಲ್ಯ ವಿವಾಹ ಕಾನೂನು ವಿರೋಧಿಯಾಗಿದ್ದು, ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಪ್ರತಿಯೊಂದು ಇಲಾಖೆಗಳ ಪಾತ್ರ ಮಹತ್ವದ್ದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು. ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ‘ಭದ್ರ ಬಾಲ್ಯ, ಬಾಲ್ಯ ವಿವಾಹ, ಬಾಲ್ಯ ಗರ್ಭಿಣಿ, ಪೋಕ್ಸೋ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಇನ್ನಿತರೆ ಶಿಶು ಕೇಂದ್ರಿತ ವಿಷಯಗಳ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವ ಸಮಯದಲ್ಲಿ, ಮದುವೆ, ಗಂಡ, ಮಕ್ಕಳೆಂದು ಅರಿವಿಲ್ಲದ ಸಂದರ್ಭದಲ್ಲಿ ಮದುವೆ ಮಾಡಿ ದಲ್ಲಿ ಸಮಸ್ಯೆಗೆ ಸಿಲುಕುತ್ತಾರೆ. ಜೊತೆಗೆ ಗರ್ಭಕೋಶದ ತೊಂದರೆ, ರಕ್ತಹೀನತೆಯಿಂದ ಬಳಲುತ್ತಾರೆ. ಬಾಲ್ಯದಲ್ಲಿ ವಿವಾಹ ಮಾಡಿದರೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿ ಇಡೀ ಜೀವನ ಹಾಳು ಮಾಡಿಕೊಂಡು ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದ ಅವರು, ಬಾಲ್ಯ ವಿವಾಹ ತಡೆಯುವ ಸಲುವಾಗಿ ವಿವಿಧ ಇಲಾಖೆಗಳಿಗೆ ಜವಾಬ್ದಾರಿ ನೀಡಲಾಗಿದೆ. ಅದರಂತೆ ಕಾರ್ಯಪ್ರವೃತ್ತರಾಗಿ ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಕ್ರಮ ವಹಿಸಬೇಕು ಎಂದರು. ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ, ಬಾಲ್ಯವಿವಾಹ, ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು ಗರ್ಭಿಣಿಯಾಗುವುದನ್ನು ತಡೆಗಟ್ಟುವಲ್ಲಿ ಶಾಲಾ ಶಿಕ್ಷಣ ಇಲಾಖೆ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಏಳು ದಿನಗಳಿಗಿಂತ ಹೆಚ್ಚಿನ ಅವಧಿಗೆ ಶಾಲೆಗೆ ಗೈರು ಹಾಜರಾದಲ್ಲಿ ಆ ಶಾಲೆ ಶಿಕ್ಷಕರು ಅನುಸರಣೆ ಮಾಡಿ ಶಾಲೆಗೆ ಮರು ಹಾಜರಾಗುವಂತೆ ನೋಡಿಕೊಳ್ಳಬೇಕು. ಶಾಲೆಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮಾಹಿತಿ ಲಭ್ಯವಾಗದ ಪ್ರಕರಣಗಳು ಕಂಡು ಬಂದಲ್ಲಿ ಆ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಾವಲು ಸಮಿತಿಗೆ ವರದಿ ನೀಡಬೇಕು. ಶಾಲೆಗೆ ಗೈರು ಹಾಜರಾಗಲು ನಿಖರವಾದ ಕಾರಣಗಳನ್ನು ತಿಳಿದು ಶಾಲೆಗೆ ಮರು ದಾಖಲೆಗೆ ಕ್ರಮ ವಹಿಸಬೇಕು. ಶಾಲೆಗಳಲ್ಲಿ ಪ್ರಮುಖವಾಗಿ ವಿದ್ಯಾರ್ಥಿನಿ ಯರಿಗೆ ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸಬೇಕು. ಶಾಲಾ ಆವರಣದಲ್ಲಿ ಬಾಲ್ಯ ವಿವಾಹ ದಿಂದಾಗುವ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಬೇಕು, ಬಾಲ್ಯ ವಿವಾಹ ನಡೆಯುವ ಕುರಿತು ಮಾಹಿತಿ ದೊರೆತಲ್ಲಿ ಸಹಾಯವಾಣಿ ಹಾಗೂ ಅಧಿಕಾರಿಗಳ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಬೇಕು ಎಂದರು. ಶಾಲೆಗಳಲ್ಲಿ ಕಡ್ಡಾಯವಾಗಿ ಪೋಷಕರ ಸಭೆಗಳನ್ನು ಏರ್ಪಡಿಸಿ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಬೇಕು ಎಂದ ಅವರು, ಶಾಲಾ ವ್ಯಾಪ್ತಿಯ ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಬೇಕು ಎಂದು ತಿಳಿಸಿದರು. ಬಾಲ ಗರ್ಭಿಣಿಯರ ನಿಖರ ವಯಸ್ಸನ್ನು ದಾಖಲಿಸಲು ಆರೋಗ್ಯ ಕೇಂದ್ರಗಳಲ್ಲಿ ವಯಸ್ಸಿನ ಮ್ಯಾಟ್ರಿಕ್ಸ್ ಸೂಚ್ಯಂಕ (ಏಜ್ ಮ್ಯಾಟ್ರಿಕ್ಸ್ ಇಂಡೆಕ್ಸ್) ವನ್ನು ಕಡ್ಡಾಯವಾಗಿ ಅನುಸರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಬಾಲ ಗರ್ಭಿಣಿಯರ ಬಗ್ಗೆ ವರದಿ ಮಾಡಲು ಸರಳೀಕೃತ ವಿಧಾನ ಅಳವಡಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮಟೆ ಮಾತನಾಡಿ, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಯ 1098 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರಲ್ಲದೆ, ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಇಂತಹ ಘಟನೆಗಳನ್ನು ತಡೆಗಟ್ಟಬಹುದು. ಯಾವುದೇ ಕಾರಣಕ್ಕೂ ಹಳ್ಳಿಗಳಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಬಾರದು. ಕಾನೂನಿನ ಚೌಕಟ್ಟಿ ನಲ್ಲಿ ಕ್ರಮ ಜರುಗಿಸಿದರೆ ಮುಂದೆ ಇಂತಹ ಪ್ರಕರಣ ನಡೆಯುವುದಿಲ್ಲ ಎಂದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಂಜುನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
17 ಕೆಸಿಕೆಎಂ 2ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ‘ಭದ್ರ ಬಾಲ್ಯ’ ಬಾಲ್ಯ ವಿವಾಹ, ಬಾಲ್ಯ ಗರ್ಭಿಣಿ, ಪೋಕ್ಸೋ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳು ಮತ್ತು ಇನ್ನಿತರೆ ಶಿಶು ಕೇಂದ್ರಿತ ವಿಷಯಗಳ ಕುರಿತು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.