ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡಿ: ಅರವಿಂದ್

KannadaprabhaNewsNetwork |  
Published : Jan 15, 2024, 01:48 AM IST
೧೪ಕೆಎಂಎನ್-೪ಮಂಡ್ಯದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಮನೆ ಮನೆಗೆ ರಾಮ ಸೀತೆ, ಲಕ್ಷ್ಮಣ, ಮಾರುತಿ ವೇಷಧಾರಿಗಳೊಂದಿಗೆ ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ತೆರಳಿ ಮಂತ್ರಾಕ್ಷತೆ, ಹಿಂದೂಧ್ವಜ ವಿತರಿಸಿದರು. | Kannada Prabha

ಸಾರಾಂಶ

ಶ್ರೀರಾಮ ಹುಟ್ಟಿದ ನೆಲದಲ್ಲಿಯೇ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವುದು ೫೦೦ ವರ್ಷಗಳ ಭಾರತೀಯರ ಕನಸು. ಅದೀಗ ನನಸಾಗಿದೆ. ಇಂತಹ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಾಮಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯರೂ ಹೆಮ್ಮೆಪಡಬೇಕು. ಐಕ್ಯತೆಯ ಪ್ರತೀಕವಾಗಿರುವ ಭವ್ಯ ಮಂದಿರಕ್ಕೆ ವಿರೋಧ ಸಲ್ಲದು ಎಂದು ಬಿಜೆಪಿ ಮುಖಂಡ ಎಚ್.ಆರ್. ಅರವಿಂದ್ ಹೇಳಿದರು.

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಬಂದಿರುವ ಪವಿತ್ರ ಮಂತ್ರಾಕ್ಷತೆ, ಕರಪತ್ರ ಹಾಗೂ ಹಿಂದೂ ಧ್ವಜವನ್ನು ವಿತರಣಾ ಕಾರ್ಯ ನಡೆಯಿತು. ನಗರದ ಚಾಮುಂಡೇಶ್ವರಿ ಬಡಾವಣೆಯ ಪ್ರತಿ ಮನೆ ಮನೆಗೆ ರಾಮ, ಸೀತೆ, ಲಕ್ಷ್ಮಣ ಹಾಗೂ ಆಂಜನೇಯನ ವೇಷಧಾರಿಗಳೊಂದಿಗೆ ತೆರಳಿ ಉದ್ಘಾಟಿಸಿದರು.

ಶ್ರೀರಾಮ ಹುಟ್ಟಿದ ನೆಲದಲ್ಲಿಯೇ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವುದು ೫೦೦ ವರ್ಷಗಳ ಭಾರತೀಯರ ಕನಸು. ಅದೀಗ ನನಸಾಗಿದೆ. ಇಂತಹ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕು ಎಂದರು.

ರಾಮನೂರಿನಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನೂರಾರು ಕರಸೇವಕರು ತಮ್ಮ ಪ್ರಾಣ ತ್ಯಾಗಮಾಡಿ, ಲಕ್ಷಾಂತರ ಮಂದಿ ಹೋರಾಟ ಮಾಡಿದ್ದಾರೆ. ಅದರ ಫಲವಾಗಿ ನಾವು ಇಂತಹ ಸತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇವೆ ಎಂದರು.

ಜ.೨೨ರಂದು ೫ ದೀಪಗಳನ್ನು ಹಚ್ಚಿ ಲೋಕಕಲ್ಯಾಣಕ್ಕೆ ಸಾಕ್ಷಿಯಾಗಿ ಧನ್ಯತಾಭಾವ ಪಡೆಯಬೇಕು. ರಾಮ,ಲಕ್ಷ್ಮಣ, ಸೀತೆ, ಶ್ರೀ ಆಂಜನೇಯನ ಹೆಸರಿನಲ್ಲಿ ೪ ದೀಪಗಳಿದ್ದರೆ ದೇಶಕ್ಕಾಗಿ ಒಂದು ದೀಪ ಹಚ್ಚಿ. ಒಟ್ಟು ಐದು ದೀಪಗಳನ್ನು ಹಚ್ಚುವುದರ ಮೂಲಕ ಬೆಳಕಿನಲ್ಲಿ ನಾವು ಧನ್ಯತೆಯನ್ನು ಕಾಣಬೇಕು ಎಂದು ನುಡಿದರು.

ರಾಮಮಂದಿರ ಉದ್ಘಾಟನೆಯಾಗುವ ದಿನ ಮನೆಯ ಮೇಲೆ ಶ್ರೀರಾಮಮೂರ್ತಿಯುಳ್ಳ ಧ್ವಜವನ್ನು ಹಾರಿಸುವುದು. ಹಬ್ಬದ ರೀತಿ ಮನೆ ಮಂದಿಯೆಲ್ಲ ಸಂಭ್ರಮದಿಂದ ಪಾಲ್ಗೊಂಡು ಶ್ರೀರಾಮಾಂಜನೇಯ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಮ ಸೀತೆ, ಲಕ್ಷ್ಮಣ, ಮಾರುತಿ ವೇಷಧಾರಿಗಳಾಗಿ ಆರ್ಯನ್, ಜನಕನಾರಾಯಣ್, ಧನ್ವಿ, ದೀಪಕ್ ಕಾಣಿಸಿಕೊಂಡರು. ಬಿಜೆಪಿ ಮುಖಂಡರಾದ ಕೇಶವ, ನವೀನ್‌ಶೆಟ್ಟಿ, ನರಸಿಂಹ ಇತರರು ಪಾಲ್ಗೊಂಡಿದ್ದರು.

ಮನೆ ಮನೆಗೆ ಶ್ರೀರಾಮ ಮಂತ್ರಾಕ್ಷತೆ ವಿತರಣೆ

ಮಂಡ್ಯ: ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ನಗರದ ಡವರಿ ಸಮಾಜ ಮತ್ತು ಪೇಟೆ ಬೀದಿಗೆ ಮನೆಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಲಾಯಿತು.ನಗರದ ಡವರಿ ಸಮಾಜ ಹಾಗೂ ಪೇಟೆ ಬೀದಿಯಲ್ಲಿ ರಾಮ, ಲಕ್ಷ್ಮಣ, ಸೀತೆ ಹಾಗೂ ಹನುಮಂತ ವೇಷಧಾರಿಗಳೊಂದಿಗೆ ಮನೆ ಮನೆಗೆ ತೆರಳಿ ವಿಶೇಷವಾಗಿ ಅರಿಸಿನ, ಕುಂಕುಮ ಮಾರುವ ಡವರಿ ಸಮಾಜದ ಮನೆಮನೆಗೆ ಮಂತ್ರಾಕ್ಷತೆಯನ್ನು ವಿತರಿಸಲಾಯಿತು.ಈ ವೇಳೆ ಮಹಿಳೆಯರು ಆರತಿ ಎತ್ತಿ, ಹೂಗಳನ್ನು ಅರ್ಪಿಸಿ ವೇಷಧಾರಿಗಳನ್ನು ಭಕ್ತಿಯಿಂದ ಸ್ವಾಗತಿಸಿದರು. ಇದೇ ವೇಳೆ ರಾಮಭಕ್ತರು, ಬಿಜೆಪಿ ಕಾರ್ಯಕರ್ತರು ಅಯೋಧ್ಯೆಯಿಂದ ಶ್ರೀರಾಮ ಮಂದಿರದಿಂದ ಮಂಡ್ಯಕ್ಕೆ ಬಂದಿರುವ ಪವಿತ್ರಾ ಮಂತ್ರಾಕ್ಷತೆ ಹಾಗೂ ಕರಪತ್ರ ನೀಡಿದರು.ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ರಮೇಶ್‌, ಯುವಬ್ರಿಗೇಡ್‌ನ ಯೋಗೇಶ್‌ಶೆಟ್ಟಿ, ಆಟೋ ಚಂದ್ರಶೇಖರ್, ಭವಾನಿ ಸೇರಿದಂತೆ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ