ಶಿರಸಿ: ನಗರದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಒಪ್ಪಿಸುವ ಸಭೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆಯಲ್ಲಿ ನಗರದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ನಡೆಯಿತು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ನಮ್ಮ ಅವಧಿಯಲ್ಲಿ ನಾವು ಪ್ರತಿ ಸಮ್ಮೇಳನದ ನಂತರ ಅದೇ ಸ್ಥಳದಲ್ಲಿ ಲೆಕ್ಕಪತ್ರ ಒಪ್ಪಿಸುವ ಶಿಸ್ತನ್ನು ರೂಢಿಸಿಕೊಂಡು ಬಂದಿದ್ದೇವೆ. ಸಮ್ಮೇಳನವನ್ನಷ್ಟೇ ಯಶಸ್ಸು ಮಾಡಿದರೆ ಸಾಲದು. ಅದರ ಜತೆಗೆ ಆರ್ಥಿಕ ಶಿಸ್ತು ಹಾಗೂ ಪಾರದರ್ಶಕತೆಯೂ ಸಂಘಟನೆಯ ಯಶಸ್ಸಾಗಿರುತ್ತದೆ. ಆ ನಿಟ್ಟಿನಲ್ಲಿ ಜಿಲ್ಲಾ ಕಸಾಪ ನಮ್ಮ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಪ್ರತಿಯೊಂದು ವ್ಯವಹಾರ ಪಾರದರ್ಶಕವಾಗಿದೆ ಎಂದರು.
ಸಮ್ಮೇಳನಕ್ಕೆ ದಾನಿಗಳು ಹಾಗೂ ಇಲಾಖೆಯವರು ನೀಡಿದ ಹಣಕಾಸಿನ ಮಾಹಿತಿ ಹಾಗೂ ಖರ್ಚು ಮಾಡಿದ ಪ್ರತಿಯೊಂದು ವಿವರಗಳನ್ನು ಬಿಲ್ ಹಾಗೂ ವೋಚರ್ ಸಹಿತ ಸಭೆಗೆ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಮಂಡಿಸಿದರು.
ತಹಸೀಲ್ದಾರ ಕಾರ್ಯಾಲಯದ ಮಹಾಂತೇಶ ಗಾಣಿಗೇರ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ್, ಜಿಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ವೆಂಕಟೇಶ ನಾಯ್ಕ, ಶಿರಸಿ ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ, ವಸಂತ ಕೋಣಸಾಲಿ ಮುಂಡಗೋಡ, ಪ್ರಮೋದ ನಾಯ್ಕ ಕುಮಟಾ, ಸುಬ್ರಹ್ಮಣ್ಯ ಭಟ್ಟ ಯಲ್ಲಾಪುರ, ಕಸಾಪ ಶಿರಸಿ ಘಟಕದ ಗೌರವ ಕಾರ್ಯದರ್ಶಿ ಶ್ರೀನಿವಾಸ್ ನಾಯ್ಕ, ವಾಸುದೇವ ಶಾನಭಾಗ, ಪದಾಧಿಕಾರಿ ಬಂಗಾರಪ್ಪ, ಶಿವಾನಂದ ಚಲವಾದಿ, ರವಿ ಹೆಗಡೆ ಗಡಿಹಳ್ಳಿ, ಸುಭಾಷ್ ಕಾನಡೆ ಇದ್ದರು.