ಎಲ್ಲರೂ ರಾಮ ರಾಜ್ಯ ನಿರ್ಮಾಣ ಮಾಡಲು ಸಹಕರಿಸಿ

KannadaprabhaNewsNetwork | Published : Jun 20, 2024 1:01 AM

ಸಾರಾಂಶ

ರಾಮನ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ರಾಮರಾಜ್ಯ ನಿರ್ಮಾಣ ಮಾಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಮನ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ರಾಮರಾಜ್ಯ ನಿರ್ಮಾಣ ಮಾಡಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ನಗರದ ಎಂಪ್ರೆಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಶ್ರೀರಾಮ ಒಬ್ಬ ಆದರ್ಶ ಪುರುಷ. ಸಮಾಜದಲ್ಲಿ ನಾವು ಹೇಗೆ ಇರಬೇಕು ಎಂಬುದಕ್ಕೆ ರಾಮ ಆದರ್ಶನಾದರೆ ಹೇಗೆ ಇರಬಾರದು ಎಂಬುದಕ್ಕೆ ರಾವಣ ಆರ್ಶ್ನಾಗುತ್ತಾನೆ. ರಾಮನ ಪ್ರತಿಯೊಂದು ಹೆಜ್ಜೆಯನ್ನು ಗಮನಿಸಿ ನಾವು ರಾಮನಂತೆ ಇರಬೇಕು ಎಂದರು.ಪ್ರಜೆಗಳ ಮನೆಯಲ್ಲಿ ಸಾವುನೋವು ಸಂಭವಿಸಿದರೆ ಶ್ರೀ ರಾಮ ದುಖಃ ಪಡುತ್ತಿದ್ದ. ಹಾಗೆಯೇ ಪ್ರಜೆಗಳ ಮನೆಯಲ್ಲಿ ಹಬ್ಬ ಹರಿದಿನಗಳು ನಡೆದರೆ ತಾನು ಸಂತೋಷ ಪಡುತ್ತಿದ್ದ. ಲೋಕ ಕಲ್ಯಾಣಕ್ಕಾಗಿ ರಾಮಚಂದ್ರ ಕಾಡಿಗೆ ಹೋದರೆ ರಾವಣ ತನ್ನ ಅಹಂಕಾರ ತೋರಿಸುವ ಮೂಲಕ ಅಂತ್ಯ ಕಂಡ. ಇದನ್ನು ಸಮಾಜಕ್ಕೆ ತೋರಿಸಲು ರಾಮಮಂದಿರ ನಿರ್ಮಾ ಣ ಅವಶ್ಯಕವಾಗಿತ್ತು ಎಂದು ಹೇಳಿದರು.ಯಾವುದೇ ದೇವಾಲಯಗಳಿಗೆ ಹೋದಾಗ 10 ರು.ಗಳಿಂದ ಹಿಡಿದು ಸಾವಿರದವರೆಗೆ ಸೇವೆ ಮಾಡುತ್ತೇವೆ. ಅದರ ಬದಲಾಗಿ ನಾವು ನಮ್ಮ ಊರುಗಳಲ್ಲಿಯೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಶ್ರೀರಾಮನ ಸೇವೆ ಮಾಡಿದಂತಾಗುತ್ತದೆ. ಮದುವೆಗೆ ಕೋಟ್ಯಾಂತರ ರೂ. ರ್ಚು ಮಾಡುವವರಿದ್ದಾರೆ. ಅದರ ಬದಲು ಬಡವರಿಗೆ ಲಕ್ಷ ರೂ ಖರ್ಚು ಮಾಡಿದರೆ ಸಾಕು ಅವರ ಅಭಿವೃದ್ಧಿಯಾಗುತ್ತದೆ. ಇದು ಕಲ್ಪವೃಕ್ಷದ ನಾಡು ಎಂದು ಕರೆಯುತ್ತಾರೆ. ಇದಕ್ಕೆ ಸಿದ್ದಗಂಗಾ ಮಠ ಕಾರಣವಾಗಿದೆ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳು ಕೇಳಿದ್ದನ್ನು ನೀಡುವ ಕಲ್ಪವೃಕ್ಷವನ್ನು ನಮಗೆ ನೀಡಿದ್ದಾರೆ ಎಂದು ಸ್ಮರಿಸಿದರು.ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಗುರುವಿನ ಸ್ಥಾನ ಮುಖ್ಯವಾದದ್ದು, ಗುರು ಎಂದರೆ ಬೆಳಕು, ಜ್ಞಾನ, ಸೇವೆಯಾಗಿದೆ. ಗುರು ಎಂಬ ಪದಕ್ಕೆ ಹಲವಾರು ಅರ್ಥಗಳಿವೆ. ಗ್ರಹಗಳಲ್ಲಿ ದೊಡ್ಡ ಗ್ರಹ ಗುರು ಗ್ರಹ. ಅಂತೆಯೇ ಸಮಾಜದಲ್ಲಿ ಗುರು ದೊಡ್ಡ ಸ್ಥಾನ ಪಡೆದಿದ್ದಾನೆ. ಪೇಜಾವರ ಶ್ರೀಗಳು ಸಹ ಸಮಾಜದ ಭಾರವನ್ನು ತಮ್ಮ ಹೆಗಲ ಮೇಲೆ ಹೊತ್ತಿಕೊಂಡಿದ್ದು ಸಮಾಜವನ್ನು ಧರ್ಮದ ದಾರಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಹಿಂದೂ ಸಮಾಜದಲ್ಲಿರುವ ಅಸಮತೋಲನ ಸರಿಪಡಿಸಲು ಪೂಜ್ಯರು ಜವಾಬ್ದಾರಿ ಹೊತ್ತಿದ್ದಾರೆ. ಇದು ನಮ್ಮೆಲ್ಲರಿಗೂ ಮಾದರಿ. ಜಿಲ್ಲೆಯ ಎಲ್ಲ ಸಮಾಜದವರು ಈ ಕಾರ್ಯಕ್ರಮ ಮಾಡಿರುವುದು ಒಂದು ಸಂದೇಶ ನೀಡಿದಂತಾಗಿದೆ ಎಂದು ಹೇಳಿದರು.ಡಾ.ಪರಮೇಶ್ ಮಾತನಾಡಿ, ಪೇಜಾವರ ಶ್ರೀಗಳ ಸಮಾಜ ಕಳಕಳಿ ನಮ್ಮ ಸಂಸ್ಕೃತಿಯನ್ನು ಉಳಿಸಲು ಮಾಡುವ ಕಾರ್ಯಜವನ್ನು ನಾವು ಎಂದಿಗೂ ಮರೆಯುವಂತಿಲ್ಲ. ರಾಮ ಜನ್ಮಭೂಮಿಗೆ ಹೋರಾಟ ನಡೆಯುವಾಗ ಪೇಜಾವರ ಮಠದ ಹಿರಿಯ ಶ್ರೀಗಳು ಅಲ್ಲಿಯೇ ಇದ್ದು ರಾಮನ ಸೇವೆ ಮಾಡಿದ್ದರು. ಅದರಂತೆ ಈಗ ಕಿರಿಯ ಶ್ರೀಗಳು ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿ ಹಿರಿಯ ಶ್ರೀಗಳ ದಾರಿಯಲ್ಲಿ ನಡೆದಿದ್ದಾರೆ ಎಂದರು.

ಇದಕ್ಕೂ ಮುನ್ನ ಶ್ರೀ ಶಂಕರ ಮಠದಿಂದ ಎಂಪ್ರೆಸ್ ಆವರಣದವರೆಗೆ ನಡೆದ ಶೋಭಾಯಾತ್ರೆಯಲ್ಲಿ ಮಹಿಳೆಯರು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಇದೇ ವೇಳೆ ಪಾರ್ವತಮ್ಮ ಭೀಮರಾಜ ಅರಸ್ ಎಂಬುವರ ಮನೆ ನಿರ್ಮಾ ಣ ಕಾರ್ಯವಕ್ಕೆ 4 ಲಕ್ಷ ರೂ.ಗಳನ್ನು ನೀಡಲಾಯಿತು. ಗುರುವಂದನಾ ಸಮಾರಂಭದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಸಿದ್ದಗಂಗಾ ಆಸ್ಪತ್ರೆಯ ಡಾ. ಎಸ್. ಪರಮೇಶ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಕೆಪಿಸಿಸಿ ವಕ್ತಾರ ಮುರುಳೀದರ ಹಾಲಪ್ಪ ಮತ್ತಿತರರಿದ್ದರು.

ಪೇಜಾವರ ಮಠದಿಂದ ಆಸ್ಪತ್ರೆ ನಿರ್ಮಾಣ: ಪೇಜಾವರ ಮಠ ಈಗಾಗಲೇ ಎಲ್ಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಮುಂದಿನ ದಿನಗಳಲ್ಲಿ ತುಮಕೂರಿನಲ್ಲಿ ಪೇಜಾವರ ಮಠದಿಂದ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಪೇಜಾವರ ಶ್ರೀಗಳು ಭರವಸೆ ನೀಡಿದರು.

Share this article