ಎಲ್ಲರೂ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಿ

KannadaprabhaNewsNetwork | Published : May 11, 2024 12:30 AM

ಸಾರಾಂಶ

ವಿಜಯಪುರ: ಸಾಹಿತ್ಯ ಪರಿಷತ್ತಿನ ಕೆಲಸ ಮಾಡಲು ಸಾಹಿತಿಗಳೇ ಆಗಬೇಕೆಂದೇನೂ ಇಲ್ಲ. ಕನ್ನಡ ಓದು ಬರಹ ಬರುವವರು ಯಾರು ಬೇಕಾದರೂ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಬಹುದು ಎಂದು ತಾಲೂಕು ಕಸಾಪ ಘಟಕದ ಅಧ್ಯಕ್ಷ ನಂಜೇಗೌಡ ಹೇಳಿದರು.

ವಿಜಯಪುರ: ಸಾಹಿತ್ಯ ಪರಿಷತ್ತಿನ ಕೆಲಸ ಮಾಡಲು ಸಾಹಿತಿಗಳೇ ಆಗಬೇಕೆಂದೇನೂ ಇಲ್ಲ. ಕನ್ನಡ ಓದು ಬರಹ ಬರುವವರು ಯಾರು ಬೇಕಾದರೂ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸ ಮಾಡಬಹುದು ಎಂದು ತಾಲೂಕು ಕಸಾಪ ಘಟಕದ ಅಧ್ಯಕ್ಷ ನಂಜೇಗೌಡ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ಐಟಿಐ ಕಾಲೇಜಿನಲ್ಲಿ ತಾಲೂಕು ಕಸಾಪ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡಬೇಕು. ಬಹುತೇಕ ಸಂಸ್ಥೆಗಳು ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ಇಲ್ಲವೇ ಐದತ್ತು ವರ್ಷಗಳಲ್ಲಿ ಮುಚ್ಚಿಹೋಗುತ್ತವೆ. ಸಾಹಿತಿಗಳು, ಬುದ್ದಿಜೀವಿಗಳೆಲ್ಲರೂ ಹುಟ್ಟು ಹಾಕಿರುವ ಸಾಹಿತ್ಯ ಪರಿಷತ್ತು 100 ವರ್ಷ ಪೂರೈಸಿ ಗಟ್ಟಿಯಾಗಿ ನಿಂತಿದೆ. ಅದನ್ನು ಮುನ್ನಡೆಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು.

ರಂಗಕಲಾವಿದ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಕನ್ನಡ ಭಾಷೆಯ ಹಿರಿಮೆಯನ್ನು ಜಗತ್ತಿಗೆ ಸಾರಬೇಕು. ಇಲ್ಲಿನ ಕವಿಗಳು, ಸಾಹಿತಿಗಳು, ಲೇಖಕರು, ದಾಸರು, ಶರಣರು ಹೀಗೆ ಎಲ್ಲಾ ವಿಭಾಗಗಳಲ್ಲಿನ ಮಹನೀಯರನ್ನು ಪ್ರಪಂಚಕ್ಕೆ ಪರಿಚಯಿಸಬೇಕು ಎನ್ನುವ ನಿಟ್ಟಿನಲ್ಲಿ ಹುಟ್ಟುಹಾಕಿದ ಸಾಹಿತ್ಯ ಪರಿಷತ್ತು, ಅನೇಕ ಸವಾಲುಗಳ ನಡುವೆ, ಮುನ್ನಡೆಯುತ್ತಿದೆ. ಇಂತಹ ಉತ್ತಮ ಸಂಸ್ಥೆಯನ್ನು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‌ ಎಂ.ವಿಶ್ವೇಶ್ವರಯ್ಯ, ಹಾಗೂ ಸರ್. ಮಿರ್ಜಾ ಇಸ್ಮಾಯಿಲ್ ಅವರನ್ನು ನಾವೆಲ್ಲರೂ ನೆನೆಯಬೇಕಿದೆ. ಮಮ್ಮಿ, ಡ್ಯಾಡಿ ಸಂಸ್ಕೃತಿಯಿಂದ ಅಪ್ಪ, ಅಮ್ಮನ ಸಂಸ್ಕೃತಿಗೆ ಮರಳಬೇಕಿದೆ ಎಂದರು.

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಹಡಪದ್ ಮಾತನಾಡಿ, ಯುವಜನರು ಕನ್ನಡಾಭಿಮಾನ ಬೆಳೆಸಿಕೊಂಡು, ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ಸಾಹಿತ್ಯ ಮಹತ್ವವನ್ನು ತಿಳಿಸಬೇಕು ಎಂದರು.

ಜಾನಪದ ಕಲಾವಿದ ಹೊಸಹಳ್ಳಿ ವಾಸುದೇವ್ ಅವರು ಜಾನಪದ ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು.

ತಾಲೂಕು ಕಸಾಪ ಕಾರ್ಯದರ್ಶಿ ಎ.ಬಿ.ಪರಮೇಶಯ್ಯ, ಪ್ರಾಂಶುಪಾಲ ಶ್ರೀನಾಥ್, ಅಶ್ವಥಗೌಡ, ಮುನಿವೆಂಕಟರಮಣಪ್ಪ, ಸುಬ್ರಹ್ಮಣಿ, ಜೆ.ಆರ್.ಮುನಿವೀರಣ್ಣ, ಕನಕರಾಜು, ಶರಣಯ್ಯ ಹಿರೇಮಠ, ಬೈರೇಗೌಡ ಇತರರಿದ್ದರು.

Share this article