ಎಲ್ಲರೂ ಸ್ವಚ್ಛತೆಯ ಪ್ರಜ್ಞೆ ಹೊಂದಿ: ರಾಹುಲ್ ರತ್ನಂ ಪಾಂಡೆ

KannadaprabhaNewsNetwork |  
Published : May 12, 2024, 01:22 AM IST
9ಕೆಪಿಎಲ್21  ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯತಿಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನ, ಸಿಇಓ ಭಾಗಿ | Kannada Prabha

ಸಾರಾಂಶ

ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯಿತಿಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ಕೊಪ್ಪಳ: ಗ್ರಾಮದಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆಯ ಪ್ರಜ್ಞೆ ಹೊಂದಿರುವುದು ಅವಶ್ಯಕ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಹೇಳಿದರು.

ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮ ಪಂಚಾಯಿತಿಯ ಬೆಳವಿನಾಳ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಶ್ರಮದಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೆಳವಿನಾಳ ಚಿಕ್ಕ ಗ್ರಾಮವಾಗಿದ್ದು, ಈಗಾಗಲೇ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಎಲ್ಲ ಕುಟುಂಬದವರು ಇಂಗುಗುಂಡಿ ನಿರ್ಮಿಸಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಒಣ ತ್ಯಾಜ್ಯಗಳಾದ ಪ್ಲಾಸ್ಟಿಕ್, ಪೇಪರ್, ಒಣಕಸ ಸಂಗ್ರಹಿಸಲು ಮನೆಯ ಮುಂದೆ ಕಂಬಕ್ಕೆ ಹಾಕಲು ಬಿದಿರಿನ ಬುಟ್ಟಿಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ರಸ್ತೆಯಲ್ಲಿ ಎಲ್ಲೂ ಕಸ ಹಾಕಬಾರದು. 2022-23ನೇ ಸಾಲಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಸಮುದಾಯ ಇಂಗುಗುಂಡಿ ನಿರ್ಮಿಸಿ ರಾಜ್ಯಕ್ಕೆ ಮಾದರಿಯಾಗಿದೆ. ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಗ್ರಾಮದಲ್ಲಿ ಅನೈರ್ಮಲ್ಯ ಉಂಟಾಗುತ್ತದೆ. ಇದರಿಂದ ಗ್ರಾಮದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮನೆಯಿಂದ ಬಂದ ಹಸಿ ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕಾಗಿರುವುದರಿಂದ ಪ್ರತಿ ಮನೆಗೆ ಗ್ರಾಮ ಪಂಚಾಯಿತಿಯಿಂದ ಕಾಂಪೋಸ್ಟ್ ಪಿಟ್ ನಿರ್ಮಿಸಲಾಗುವುದು ಎಂದು ತಿಳಿಸಿದ ಅವರು, ಈ ಬಗ್ಗೆ ಸೂಕ್ತ ಕ್ರಮವಹಿಸಲು ಗ್ರಾಪಂಯವರಿಗೆ ಸೂಕ್ತ ನಿರ್ದೇಶನ ನೀಡಿದರು.

ಚರಂಡಿ ಸ್ವಚ್ಛ ಮಾಡಿದ ಸಿಇಒ: ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿರುವ ಚರಂಡಿಯಲ್ಲಿ ಪ್ಲಾಸ್ಟಿಕ್, ಪೇಪರ್‌ಗಳು ತುಂಬಿದ್ದನ್ನು ನೋಡಿದ ಜಿಪಂ ಸಿಇಒ ತಾವೇ ಸ್ವತಃ ಸಲಾಕೆ ಹಿಡಿದು ಚರಂಡಿಯಲ್ಲಿದ್ದ ಪೇಪರ್‌ಗಳು, ಪ್ಲಾಸ್ಟಿಕ್ ಅನ್ನು ಸಲಾಕೆಯಿಂದ ಎತ್ತಿ ಹಾಕಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದರು.

ಅಂಗನವಾಡಿ ಮಕ್ಕಳಿಗೆ ಕೈ ತೊಳೆಯುವ ಕುರಿತು ಪ್ರಾತ್ಯಕ್ಷಿಕೆ: ಗ್ರಾಮದಲ್ಲಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಪ್ರತಿನಿತ್ಯ ಊಟದ ಮುಂಚೆ ಕೈ ತೊಳೆಯುವ ವಿಧಾನ ಕುರಿತು ಪ್ರಾತ್ಯಕ್ಷಿಕೆಯನ್ನು ನಡೆಸಿ ಜಿಪಂ ಎಸ್‌ಬಿಎಂ ಸಮಾಲೋಚಕಿ ಬಸಮ್ಮ ಹುಡೇದ ಮಾಹಿತಿ ನೀಡಿದರು. ಆನಂತರ ಕಾಂಪೋಸ್ಟ್ ಪಿಟ್ ಸಗಣಿ, ಬೆಲ್ಲ ಮಿಶ್ರಣ ಮಾಡಿಕೊಂಡು ಹಸಿ ಕಸವನ್ನು ನಿರ್ವಹಣೆ ಮಾಡುವ ಕುರಿತು ವಿಧಾನ ತಿಳಿಸಲಾಯಿತು. ಜೆಜೆಎಂ ಕಾಮಗಾರಿಯಿಂದ ನೀರು ಸರಬರಾಜು ಆಗುತ್ತಿರುವ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಸ್ವಚ್ಛತಾ ಶ್ರಮದಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸ್ವಚ್ಛತೆ ಎನ್ನುವ ಪರಿಕಲ್ಪನೆ ನಮ್ಮಿಂದಲೇ ಪ್ರಾರಂಭವಾಗಬೇಕೆಂದರು. ಸ್ವಚ್ಛತಾ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಹಾಲವರ್ತಿ ಗ್ರಾಪಂಗೆ ಭೇಟಿ ನೀಡಿ ವಿವಿಧ ಯೋಜನೆಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದರು. ಗ್ರಾಮದಲ್ಲಿ ಶಾಲಾಭಿವೃದ್ಧಿ ಕಾಮಗಾರಿ, ಜೆಜೆಎಂ ಕಾಮಗಾರಿ, ಅಂಗನವಾಡಿ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಹೇಶ ಶಾಸ್ತ್ರಿ, ಪಂಚಾಯತ್‌ ರಾಜ್ ಸಹಾಯಕ ನಿರ್ದೇಶಕ ಮಹೇಶ, ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಲಾಸ್ ಬೋಸ್ಲೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶ್ರೀ, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿಪಂ ಹಾಗೂ ತಾಪಂ ಎಸ್‌ಬಿಎಂ, ನರೇಗಾ, ಸಂಜೀವಿನಿ ಯೋಜನೆಗಳ ಸಮಾಲೋಚಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು