ಸಮಾನತೆಯಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಂವಿಧಾನ ನೀಡಿದೆ
ಕುಕನೂರು:ಪ್ರತಿಯೊಬ್ಬರಿಗೂ ಸಮಾನತೆಯಿಂದ ಬದುಕುವ ಹಕ್ಕಿದೆ ಎಂದು ಹಿರಿಯ ವಕೀಲ ಡಿ.ಎಂ. ಪೂಜಾರ್ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದಲ್ಲಿ ಶ್ರೀಮಂಗಳೇಶ್ವರ ಜಾತ್ರಾಮಹೋತ್ಸವದ ಪ್ರಯುಕ್ತ ಜರುಗಿದ ನಮ್ಮ ನಡೆ ಸಮಾನತೆ ಕಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸಮಾನತೆಯಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಂವಿಧಾನ ನೀಡಿದೆ. ಇಲ್ಲಿ ಯಾರು ಮೇಲು ಅಲ್ಲ. ಯಾರು ಕೀಳು ಅಲ್ಲ. ಎಲ್ಲರೂ ಕೂಡ ಸಮಾನರು. ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು. ರಾಜಕೀಯದಲ್ಲಿ ಮೀಸಲಾತಿ ಕೂಡ ಸಂವಿಧಾನ ನೀಡಿದೆ. ಇದರಿಂದ ರಾಜಕೀಯದಲ್ಲಿ ಮಹಿಳೆಯರು ಮತ್ತು ಪುರುಷರು ಭಾಗವಹಿಸಬಹುದು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಶರಣಪ್ಪ ಉಮಚಗಿ, ನಮ್ಮ ನಡೆ ಸಮಾನತೆ ಕಡೆ ಕಾರ್ಯಕ್ರಮ ಎಲ್ಲರೂ ಮೆಚ್ಚುವಂತದ್ದು. ಎಲ್ಲರನ್ನೂ ಒಳಗೊಂಡ ಈ ವೇದಿಕೆಯು ವಿಶೇಷವಾಗಿ ಕಂಡುಬಂದಿರುವುದು ನಿಜಕ್ಕೂ ಸಂತೋಷ ಎಂದರಲ್ಲದೆ ಮಂಗಳೂರು ಗ್ರಾಮದ ಇತಿಹಾಸ ಕೂಡ ತಿಳಿಸಿದರು.
ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಕೂಡ ಪ್ರೀತಿ ಮಮತೆ ವಾತ್ಸಲ್ಯದಿಂದ ಬದುಕನ್ನು ರೂಪಿಸಿಕೊಳ್ಳಬೇಕು. ಸಂತೋಷದಿಂದ ಜೀವನ ಸಾಗಿಸಬೇಕು ಎಂದರು.
ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಮಂಗಳೂರು ಒಂದು ವಿಶೇಷ ಗ್ರಾಮ. ಈ ಗ್ರಾಮದಲ್ಲಿ ಎಲ್ಲ ಜನರು ಒಟ್ಟಾಗಿ ಸೇರಿಕೊಂಡು ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ.ಯಾರು ಶ್ರೀಮಂತರು ಅಲ್ಲ.ಬಡವರು ಅಲ್ಲ.ಎಲ್ಲರೂ ಒಂದೇ ನೆಮ್ಮದಿಯಾಗಿ ಜೀವನ ಸಾಗಿಸಬೇಕು ಎಂದರು.
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಗುರುರಾಜ ಸುಂಕದ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಕೂಡ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನು ಆಸ್ತಿಯನ್ನಾಗಿ ಮಾಡಿ ಎಂದರು.
ಹಿರಿಯ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ, ಮನುಷ್ಯನ ಜೀವನದಲ್ಲಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಕೂಡ ಒಂದೆ. ನಾವೆಲ್ಲರೂ ಸಮಾನತೆ ಹಾದಿಯಲ್ಲಿ ಸಾಗಬೇಕು ಎಂದರು.
ಶಮಷುದ್ದೀನ ಖಾಜಿ ಮಾತನಾಡಿ, ಮಹಾನ್ ವ್ಯಕ್ತಿಗಳ ಆದರ್ಶ ಗುಣ ನಾವೆಲ್ಲರೂ ಕೂಡ ಮೈಗೂಡಿಸಿಕೊಳ್ಳಬೇಕು. ಅವರ ತತ್ವ ಆದರ್ಶ ಗುಣ ಕೂಡ ಪಾಲಿಸಬೇಕು ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.