ಪ್ರಜ್ವಲ್ ಪೈಶಾಚಿಕ ಕೃತ್ಯ ಖಂಡಿಸಿ ಇಂದು ‘ಹಾಸನ ಚಲೋ’ । 10 ಸಾವಿರ ಮಂದಿ ಭಾಗಿ
ಕನ್ನಡಪ್ರಭ ವಾರ್ತೆ ಹಾಸನಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣದಿಂದಾಗಿ ಇಡೀ ಜಿಲ್ಲೆಯ ಹೆಣ್ಣುಮಕ್ಕಳು ತಲೆತಗ್ಗಿಸುವಂತಾಗಿದೆ. ಹಾಗಾಗಿ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಮೇ.೩೦ ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಹಾಸನ ಚಲೋ ಪ್ರತಿಭಟನೆಗೆ ನಾಗರಿಕರು ಬೆಂಬಲ ನೀಡಬೇಕು ಎಂದು ಹಿರಿಯ ಸಾಹಿತಿ ಹಾಗೂ ವಕೀಲರಾದ ಭಾನು ಮುಷ್ತಾಕ್ ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ‘೮೦ರ ದಶಕದಲ್ಲಿ ಸರಣಿ ಕೊಲೆಗಳ ಘಟನೆ ನಂತರ ದೇಶದಲ್ಲೇ ಬಹುದೊಡ್ಡ ಎರಡನೇ ಘಟನೆ ಎಂದರೆ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣ. ಜಿಲ್ಲೆಯ ಪ್ರಖ್ಯಾತ ದೊಡ್ಡ ಕುಟುಂಬದ ಕುಡಿ ಕಾನೂನಿಗೆ ತನ್ನನ್ನು ತಾನೇ ಒಪ್ಪಿಸಿಕೊಳ್ಳಬೇಕು. ಹಾಸನ ಜಿಲ್ಲೆಯ ಇತಿಹಾಸದಲ್ಲಿ ಇದು ಒಂದು ಅತಿ ದೊಡ್ಡ ದುರ್ಘಟನೆ. ವಿವಿಧ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವ ಹಾಸನ ಜಿಲ್ಲೆ ಇತ್ತೀಚೆಗೆ ಹೀನ ಕೃತ್ಯಗಳಿಂದ ಗುರುತಿಸುವ ಮಟ್ಟಕ್ಕೆ ಬಂದಿದೆ. ದೇಶದ ಬಹುದೊಡ್ಡ ಅತ್ಯಾಚಾರ ಆರೋಪವನ್ನು ಜಿಲ್ಲೆಯ ಒಂದು ಬಹುದೊಡ್ಡ ಕುಟುಂಬ ಎದುರಿಸುತ್ತಿದೆ. ಸಂವಿಧಾನಾತ್ಮಕ ಅಂಶಗಳನ್ನು ಎತ್ತಿ ಹಿಡಿಯಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಮಾಡಿರುವ ಫೈಚಾಚಿಕ ಕೃತ್ಯ ಇಡೀ ದೇಶದಲ್ಲೇ ಇದೇ ಮೊದಲು’ ಎಂದು ಬೇಸರ ವ್ಯಕ್ತಪಡಿಸಿದರು.ಸಂವಿಧಾನದ ಅಡಿ ಆಯ್ಕೆಯಾದಂತಹ ಯುವ ಸಂಸದ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾರೆ. ಇಂತಹ ಹೀನ ಕೃತ್ಯವನ್ನು ಖಂಡಿಸುವ ನಿಟ್ಟಿನಲ್ಲಿ ನಾಗರಿಕ ಸಮಾಜಕ್ಕೆ ವೇದಿಕೆ ಕಲ್ಪಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಬೆಂಬಲಿಸುವಂತೆ ಮನವಿ ಮಾಡಿದರು.
‘ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ. ಮನುಷ್ಯ ಗುಣ ಇರುವಂತಹ ಎಲ್ಲರೂ ಪ್ರತಿಭಟನೆಗೆ ಆಗಮಿಸಬೇಕು. ಜಿಲ್ಲೆಯಲ್ಲಿ ಎರಡನೇ ಬಾರಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕ್ರೌರ್ಯ ನಡೆದಿದೆ. ೮೦ರ ದಶಕದಲ್ಲಿ ಸರಣಿ ಕೊಲೆಗಳು ನಡೆದವು. ಅದಾದ ನಂತರ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಕಹಿ ಘಟನೆ ನಡೆದಿದ್ದು ಇಲ್ಲೇ. ಹಾಸನ ಜಿಲ್ಲೆಯ ಮರ್ಯಾದೆ ತೆಗೆದಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಮೀನಾಕ್ಷಿ ಬಾಡೆ ಮಾತನಾಡಿ, ‘ಇಷ್ಟೆಲ್ಲಾ ಸತ್ಯಾಂಶ ಇದ್ದರೂ ದೇವೇಗೌಡರ ಕುಟುಂಬದವರು ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ನೆಲದ ಕಾನೂನಿಗೆ ಗೌರವ ನೀಡುತ್ತಿಲ್ಲ’ ಎಂದು ಹೇಳಿದರು.
ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ಪ್ರಜ್ವಲ್ ದೇಶದಿಂದ ಪರಾರಿಯಾದಾಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವ್ಯಾಮೋಹಕ್ಕೆ ಗುರಿಯಾಗಿ ಪತ್ರ ಬರೆಯುವ ಬದಲು ತನ್ನ ಮೊಮ್ಮಗನನ್ನು ಕೊಡಲೇ ಬಂಧಿಸಿ ಎಂಬ ಹೇಳಿಕೆಯನ್ನು ನೀಡಬೇಕಿತ್ತು. ಆದರೆ ಆ ರೀತಿ ಮಾಡಲಿಲ್ಲ’ ಎಂದು ಕಿಡಿ ಕಾರಿದರು.‘ನೂರಾರು ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಧ್ವನಿ ಎತ್ತಬೇಕಾದ ಬಿಜೆಪಿ ನಾಯಕರು ಸಹ ದೂರ ಉಳಿದರು. ನೇಹಾ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಕೋಮುದ್ವೇಷದ ಭಾವನೆ ಮೂಡುವಂತೆ ಹಲವು ನಾಯಕರು ವರ್ತಿಸಿದರು. ಆದರೆ ಜಿಲ್ಲೆಯಲ್ಲಿ ನಡೆದಿರುವ ನೂರಾರು ಮಹಿಳೆಯರ ಮೇಲಿನ ದೌರ್ಜನ್ಯ ಕುರಿತು ಶೋಭಕ್ಕ ಆಗಲಿ, ಅಮಿತ್ ಶಾ, ಪ್ರಧಾನಿಯಾಗಲಿ ಏಕೆ ಏನು ಮಾತನಾಡಲಿಲ್ಲ’ ಎಂದು ಪ್ರಶ್ನಿಸಿದರು.
ಇದಕ್ಕೂ ಮೊದಲು ಹಾಸನ ನಗರದ ಹೇಮಾವತಿ ಪ್ರತಿಮೆಯಿಂದ ಪ್ರಮುಖ ರಸ್ತೆಗಳಲ್ಲಿ ಮೇ.೩೦ರ ಹೋರಾಟದ ಪ್ರಚಾರ ನಡೆಸಿದರು.ರಾಜ್ಯ ಕಾರ್ಯದರ್ಶಿ ದೇವಿ, ವಿಮಲಾ, ಸದಸ್ಯೆ ಪ್ರಭಾ ಇತರರು ಇದ್ದರು.