ಗಂಗಾವತಿ:ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ ಕಾಲುವೆಗೆ ನೀರು ಬಿಡಬೇಕೆಂದು ಒತ್ತಾಯಿಸಿ ಜು.31ರಂದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಜತೆ ಜಲಾಶಯಕ್ಕೆ ತೆರಳಿ ಇನ್ನು ಎರಡು ಮೂರು ದಿನಗಳಲ್ಲಿ ವಿಜಯನಗರ ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಲಾಗಿದೆ. ಆದರೂ ಅಧಿಕಾರಿಗಳ ಗಮನ ಸೆಳೆಯಲು ಗಂಗಾವತಿ ಮತ್ತು ಕೊಪ್ಪಳ ಭಾಗದವರು ಜತೆಯಾಗಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.
ಜು.31ರಂದು ಗಂಗಾವತಿ ಮತ್ತು ಕೊಪ್ಪಳ ಭಾಗದ ರೈತರು ಲಿಂಗಾಪುರ ಬಳಿ ಸೇರಿ ಅಲ್ಲಿಂದ ಜಲಾಶಯಕ್ಕೆ ತೆರಳಿ ನೀರಾವರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ನಾವೆಲ್ಲ ರೈತರು ಒಂದಾಗಿ ಹೋರಾಟ ಮಾಡಬೇಕು, ರಾಜ್ಯದಲ್ಲಿ ಈ ಕಾಂಗ್ರೆಸ್ ಪಕ್ಷದ ಆಡಳಿತ ಇರುವುದರಿಂದ ಈ ರೀತಿ ರೈತರಿಗೆ ತೊಂದರೆ ಆಗುತ್ತಿದೆ ಎಂದು ದೂರಿದರು.