ಆಪರೇಷನ್ ರೈಸ್ (ಡ್ರಗ್ಸ್ ಬೇಡ ಬ್ರೋ) ಕಾರ್ಯಕ್ರಮ
ಮಾದಕ ವಸ್ತು ಸೇವನೆಯಿಂದ ಆರೋಗ್ಯ ಮಾತ್ರವಲ್ಲದೇ ಜೀವನವು ಹಾಳಾಗುತ್ತದೆ. ಜೀವ ಅತ್ಯಮೂಲ್ಯ ಹಾಗಾಗಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇದ್ದು ಒಳ್ಳೆಯ ಭವಿಷ್ಯ ಕಟ್ಟಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕೈ ಜೋಡಿಸಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ ಹನಾಪುರ ಹೇಳಿದರು.
ಮಂಗಳವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಮುಂಡಗೋಡ ಪೊಲೀಸ್ ಠಾಣೆ ವತಿಯಿಂದ ಆಪರೇಷನ್ ರೈಸ್(ಡ್ರಗ್ಸ್ ಬೇಡ ಬ್ರೋ) ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.ನಿಮ್ಮ ಸುತ್ತಮುತ್ತ ಯಾವುದೇ ಮಾದಕ ವಸ್ತುಗಳ ಹಾವಳಿ ಕಂಡು ಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಅದಕ್ಕೆ ಕಡಿವಾಣ ಹಾಕಿ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ನರೇಂದ್ರ ಪವಾರ ಮಾತನಾಡಿ, ಮಾದಕ ವಸ್ತು ಸೇವನೆಯಿಂದಲೇ ಬಹುತೇಕ ಕಾಯಿಲೆ ಹರಡುತ್ತವೆ ಎಂದ ಅವರು, ಮಾದಕ ವ್ಯಸನಗಳಿಂದ ಆಗುವ ದುಷ್ಟರಿಣಾಮಗಳ ಕುರಿತು ಚಿತ್ರ ಪ್ರದರ್ಶಿಸುವ ಮೂಲಕ ವಿವರವಾಗಿ ಮಾಹಿತಿ ನೀಡಿದರು. ಪಿಎಸ್ಐ ಮಂಜುನಾಥ ಗೌಡರ ಪ್ರತಿಜ್ಞಾ ವಿಧಿ ಬೋಧಿಸಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ, ಟಿಬೇಟಿಯನ್ ಮುಖಂಡ ಜಂಪಾ, ಸರಕಾರಿ ಪಾಲಿಟೆಕ್ನಕ್ ಕಾಲೇಜು ಪ್ರಾಂಶುಪಾಲ ಮಂಜುನಾಥ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ ಪಟ್ಟಣಶೆಟ್ಟಿ ಮುಂತಾದವರಿದ್ದರು. ಸುಶ್ಮಿತಾ ಸಂಗಡಿಗರು ಪ್ರಾರ್ಥಿಸಿದರು. ಸರಕಾರಿ ಪದವಿಪೂರ್ವ ಕಾಲೇಜು ಶಿಕ್ಷಕ ರಮೇಶ ಪವಾರ ನಿರೂಪಿಸಿದರು. ಅಣ್ಣಪ್ಪ ಬಡಿಗೇರ ವಂದಿಸಿರು.