ಮತ ಚಲಾಯಿಸಿ, ಪ್ರಜಾಪ್ರಭುತ್ವ ಗೆಲ್ಲಿಸಿ: ಇಒ ಮಂಜುಳಾ

KannadaprabhaNewsNetwork | Published : Apr 30, 2024 2:07 AM

ಸಾರಾಂಶ

ಮಾನ್ವಿಯಲ್ಲಿ ನಮ್ಮ ನಡೆ, ಮತಗಟ್ಟೆ ಗಡೆ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಮಂಜುಳಾ ಹಕಾರಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಾನ್ವಿ

ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬ ಪ್ರಜೆಯೂ ಚಲಾಯಿಸುವಲ್ಲಿ ಯಾವುದೇ ರೀತಿಯಲ್ಲಿ ಹಿಂಜರಿಯದೆ ಮೇ 7ರಂದು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಗೆಲ್ಲಿಸಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷೆ ಮಂಜುಳಾ ಹಕಾರಿ ಹೇಳಿದರು.

ಪಟ್ಟಣದ ಕಲ್ಮಠದ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ನಮ್ಮ ನಡೆ ಮತದಾನದ ಕಡೆ ಜಾಗೃತಿ ಅಭಿಯಾನದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಮೇ 7ರಂದು ನಡೆಯುವ ಮತದಾನ ಭಾಗವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಅಗತ್ಯ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಹಬ್ಬ ಆಚರಿಸಲಾಗುತ್ತಿದೆ. ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ತಹಸೀಲ್ದಾರ್ ಜಗದೀಶ್ ಕೌರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾರನೇ ನಿಜವಾದ ಪ್ರಭು. ಪ್ರಜಾಪ್ರಭುತ್ವ ಜೀವಂತವಾಗಿ ಉಳಿಯಬೇಕೆಂದರೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ನಮಗೆ ಸಂವಿಧಾನಾತ್ಮಕವಾಗಿ ದೊರೆತಿರುವ ಹಕ್ಕು. ಮೇ 7ರಂದು ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಮತದಾರರು ನೆರೆ ಹೊರೆಯವರಿಗೂ ಮತದಾನದ ಜಾಗೃತಿ ಮೂಡಿಸಿ ಮತ ಚಲಾಯಿಸಲು ಪ್ರೇರೇಪಿಸಬೇಕು. ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೇಪಣೆ ದಾಕ್ಷಿಣ್ಯಗಳಿಗೆ ಪ್ರಭಾವಿತರಾಗದೆ ವಿವೇಚನೆಯಿಂದ ಮತ ಚಲಾಯಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತದಾನ ಮಾಡಿ ಶೇ.100ರಷ್ಟು ಗುರಿ ಸಾಧಿಸಬೇಕು ಎಂದರು.

ಎನ್.ಆರ್.ಎಲ್.ಎಮ್ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಶಿವರಾಜ್ ರವರು ಪ್ರತಿಜ್ಞಾ ವಿಧಿ ಭೋದಿಸಿದರು. ಇದೇ ವೇಳೆ ಜಾಥಾವು ಕಲ್ಮಠ ಕಾಲೇಜು ನಿಂದ ಆರಂಭಗೊಂಡು ಬಸವ ವೃತ್ತಕ್ಕೆ ಬಂದು ತಲುಪಿತು.

ಈ ಸಂದರ್ಭದಲ್ಲಿ ನರೇಗಾ ಎಡಿ ಖಾಲೀದ್ ಅಹ್ಮದ್, ಸಿಡಿಪಿಒ ಮನ್ಸೂರ್ ಅಹ್ಮದ್, ಟಿಎಚ್ಒ ಶರಣು ಬಸವ, ಆರ್.ಡಿಪಿಆರ್ ಎಡಿ ದೀಪಾ, ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮನಿ, ಐಇಸಿ ವೀರೇಶ, ವಲಯ ಮೇಲ್ವಿಚಾರಕ ಸೂರತ್ ಪ್ರಸಾದ್ ಗಟ್ಟು, ಶಿಕ್ಷಕರು, ತಾಪಂ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿ ಹಾಜರಿದ್ದರು.

Share this article