ಮಾರುಕೇರಿ ಎಸ್ಪಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಣೆ
ತಾಲೂಕಿನ ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ಫಿನಿಟಿ ಆರ್ಗನೈಸೇಶನ್ ವತಿಯಿಂದ ಶಾಲಾ ಬ್ಯಾಗ್, ಪಟ್ಟಿ, ಕಂಪಾಸ್ ಮತ್ತಿತರ ಪರಿಕರ ವಿತರಿಸಲಾಯಿತು.
ವಿದ್ಯಾರ್ಥಿಗಳಿಗೆ ಪರಿಕರ ವಿತರಿಸಿ ಮಾತನಾಡಿದ ಆರ್ಗನೈಸೇಶನ್ ಮುಖ್ಯಸ್ಥೆ ಡಾ. ನಿವಿಯಾ ಗೋಮ್ಸ, ಇನ್ಫಿನಿಟಿ ಅರ್ಗನೈಸೇಶನ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಎಲ್ಲರೂ ಶಿಕ್ಷಣ ಪಡೆಯಬೇಕು ಎನ್ನುವುದು ಆರ್ಗನೈಸೇಶನ್ ನ ಆಶಯವಾಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಅವಶ್ಯಕತೆ ಇದೆ. ಶಿಕ್ಷಣ ಇದ್ದರೆ ಏನನ್ನೂ ಸಾಧಿಸಬಹುದು ಎಂದ ಅವರು, ಇಲ್ಲಿನ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಈ ಶಾಲೆಯನ್ನು ಉಳಿಸಿ ಬೆಳೆಸಬೇಕು. ದಾನಿಗಳು ಶಾಲೆಗೆ ಸಹಕಾರ ಮಾಡಬೇಕು ಎಂದರು.ಪ್ರಮುಖ ರಾಘವೇಂದ್ರ ಹೆಬ್ಬಾರ ಮಾತನಾಡಿ, ಹಿರಿಯರು ಕಷ್ಟಪಟ್ಟು ಕಟ್ಟಿದ ಶಾಲೆಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ ಮಾತನಾಡಿ, ದಾನಿಗಳ ಸಹಾಯದಿಂದ ಪ್ರೌಢಶಾಲೆ ನಡೆಸಬೇಕಿದೆ. ಡಾ. ನಿವಿಯಾ ಗೋಮ್ಸ ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್, ಕಂಪಾಸ ಮತ್ತಿತರ ಪರಿಕರ ನೀಡುವುದರ ಮೂಲಕ ನೆರವಾಗಿದ್ದಾರೆ. ಇದನ್ನು ಮಕ್ಕಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು. ವೇದಿಕೆಯಲ್ಲಿ ತೆರೆಸಾ ನೊರೋನಾ, ಪೀಟರ್ ಗೋಮ್ಸ, ವೆಂಕಟೇಶ ದೇವಡಿಗ, ಗಣೇಶ ಅಡಿಗ, ವೆರೋನಿಕಾ, ಶ್ರುತಿ ರಾಕೇಶ, ರಾಕೇಶ, ದೇವ್ ಮುಂತಾದರಿದ್ದರು. ಮುಖ್ಯ ಶಿಕ್ಷಕ ಪಿ.ಟಿ. ಚಹ್ವಾಣ ಸ್ವಾಗತಿಸಿದರು. ಶಿಕ್ಷಕ ದಿನೇಶ ನಿರೂಪಿಸಿದರು. ದೈಹಿಕ ಶಿಕ್ಷಕ ವಿನಾಯಕ ಭಟ್ಟ ವಂದಿಸಿದರು. ಶಾಲಾ ಬ್ಯಾಗ್, ಕಂಪಾಸ್ ಮತ್ತಿತರ ಪರಿಕರ ಪಡೆದ ವಿದ್ಯಾರ್ಥಿಗಳು ಸಂತಸಪಟ್ಟರು.