ಎತ್ತುಗಳ ಕೊಂಬು ಕೆತ್ತುವ ಕಸುಬು ಕಣ್ಮರೆ!

KannadaprabhaNewsNetwork |  
Published : Jun 28, 2026, 03:30 AM IST
ಮರಿಯಮ್ಮನಹಳ್ಳಿಯಲ್ಲಿ ರೈತರು ತಮ್ಮ ಎತ್ತುಗಳ ಕೊಂಬುಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. | Kannada Prabha

ಸಾರಾಂಶ

ಕಾರ ಹುಣ್ಣಿಮೆಗೂ ಮುನ್ನ ರೈತರು ಎತ್ತಿನ ಕೊಂಬು ಸ್ವಚ್ಛಗೊಳಿಸಿ, ಶೃಂಗರಿಸುವ ಕಾರ್ಯ ಮಾಡುತ್ತಾರೆ. ಆದರೆ ಈಗ ಎತ್ತಿನ ಕೊಂಬು ಸ್ವಚ್ಛಗೊಳಿಸುವ ಪರಿಣತಿ ಇದ್ದವರ ಸಂಖ್ಯೆ ಕಡಿಮೆಯಾಗಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ಜೀವನಾಧಾರಿತ ದೇಶಿ ಕಸುಬುಗಳು ಇತ್ತೀಚಿನ ದಿನಗಳಲ್ಲಿ ನೇಪಥ್ಯಕ್ಕೆ ಸರಿಯುತ್ತಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಎತ್ತುಗಳ ಕೊಂಬು (ಕೆತ್ತುವುದು) ಸ್ವಚ್ಛಗೊಳಿಸುವ ಕಸಬನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳು ಇತ್ತೀಚೆಗೆ ತೆರೆಮರೆಗೆ ಸರಿಯುತ್ತಿದ್ದಾರೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಅಲ್ಲಲ್ಲಿ ಈಗಲೂ ಅಂತಹ ಕಸುಬು ಮಾಡುವವರು ಉಳಿದುಕೊಂಡಿದ್ದಾರೆ, ಹೀಗಾಗಿ ರೈತರಿಗೆ ಅನುಕೂಲವಾಗಿದೆ.

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ಟ್ರ್ಯಾಕ್ಟರ್, ಟಿಲ್ಲರ್ ಬಳಕೆಯಿಂದ ಎತ್ತುಗಳ ಬಳಕೆ ಕಡಿಮೆಯಾಗುತ್ತಿದೆ. ಎತ್ತುಗಳ ಕೊಂಬುಗಳ ಸ್ವಚ್ಛಗೊಳಿಸುವವರು ಸಹ ಕಡಿಮೆಯಾಗುತ್ತಿದ್ದಾರೆ.

ಬೇಸಿಗೆ ಕಳೆದು ಮುಂಗಾರು ಆರಂಭದ ಮೊದಲ ಹಬ್ಬವಾದ ಕಾರ ಹುಣ್ಣಿಮೆಯಲ್ಲಿ ರೈತರು ಮನೆಯಲ್ಲಿರುವ ರಾಸುಗಳಿಗೆ ರೋಗನಿರೋಧಕ ಔಷಧಿ ನೀಡಿ, ಎತ್ತುಗಳ ಕೊಂಬು ಸ್ವಚ್ಛಗೊಳಿಸುತ್ತಾರೆ. ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಿ ಕಾರಹುಣ್ಣಿಮೆಯಂದು ಎತ್ತುಗಳು ಮತ್ತು ಕರುಗಳನ್ನು ಓಡಿಸಿ ಖುಷಿ ಪಡುತ್ತಾರೆ.

ಸಾಮಾನ್ಯವಾಗಿ ಕಾರಹುಣ್ಣಿಮೆಗೂ ಮೊದಲು ಎತ್ತಿನ ಕೊಂಬುಗಳನ್ನು ಸ್ವಚ್ಛಗೊಳಿಸುವ ಕಾರ್ಯ ಬಲು ಜೋರಾಗಿ ನಡೆಯುತ್ತದೆ. ಆದರೆ ಈಗ ಅನೇಕ ಊರುಗಳಲ್ಲಿ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕಾಯಕ ಮಾಡುವವರಿಲ್ಲ. ಕೆಲವು ಹಳ್ಳಿಗಳಲ್ಲಿ ಕೆಲವಷ್ಟೇ ಜನ ಈ ಕಸುಬು ಮಾಡುವವರು ಉಳಿದುಕೊಂಡಿದ್ದಾರೆ. ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ವರದಾಪುರದ ಸುಮಾರು 74 ವರ್ಷದ ನೂರ್‌ ಸಾಹೇಬ್ ಅವರು ಈ ಕಸುಬು ಕಾಪಾಡಿಕೊಂಡು ಬಂದಿದ್ದಾರೆ. ಅದು ಅವರಿಗೆ ಅಪ್ಪನಿಂದ ಬಂದ ಬಳುವಳಿ.

ಕೃಷಿಕರು ಎತ್ತುಗಳನ್ನು ಮನೆ ಮಕ್ಕಳಂತೆ ಕಾಣುತ್ತಾರೆ. ಎತ್ತಿನ ಒರಟಾದ ಕೊಂಬುಗಳನ್ನು ತಿದ್ದಿ-ತೀಡಿ, ಕೊಂಬುಗಳ ತುದಿ ಕತ್ತರಿಸಿ, ಅವುಗಳಿಗೆ ಗೆಜ್ಜೆಗಳನ್ನು ಹಾಕಿ ಖುಷಿ ಪಡುತ್ತಾರೆ. ನೂರ್‌ ಸಾಹೇಬ್ ಅವರು 15 ವರ್ಷ ಬಾಲಕನಾಗಿದ್ದಾಗಿನಿಂದ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸುಮಾರು 60 ವರ್ಷಗಳಿಂದ ಈ ವೃತ್ತಿಯಲ್ಲಿ ಅವರು ಪರಿಣತರು. ರೈತರು ನೀಡುವ ಹಣದಿಂದ ಬದುಕಿನಬಂಡಿ ಸಾಗಿಸುತ್ತಾರೆ. ಊರೂರು ತಿರುಗುತ್ತಾರೆ.

ಎತ್ತುಗಳ ಕೊಂಬು ಸ್ವಚ್ಛಗೊಳಿಸುವುದು ಅಷ್ಟು ಸುಲಭವಲ್ಲ, ಸ್ವಲ್ಪ ಹೆಚ್ಚು ಕಡಿಮೆ ಆದರೂ ಎತ್ತಿನ ಕೊಂಬಿಗೆ ಗಾಯಗಳಾಗುವ ಸಂಭವ ಇರುತ್ತದೆ. ಸಾಕಷ್ಟು ಅನುಭವ ಬೇಕು. ಆದರೆ ಕೊಂಬು ಸ್ವಚ್ಛಗೊಳಿಸುವ ಕುಶಲಕರ್ಮಿಗೆ ಮಾನ್ಯತೆ ಇಲ್ಲ. ರೈತರು ನೀಡಿದಷ್ಟು ಹಣ ಪಡೆದುಕೊಂಡು ಈ ಕಾಯಕ ಮಾಡುವಂತಾಗಿದೆ ಎಂದು ನೂರ್‌ ಸಾಹೇಬ್ ಹೇಳುತ್ತಾರೆ.

ಎತ್ತುಗಳ ಕೊಂಬು ಸ್ವಚ್ಛಗೊಳಿಸಲು ಒಂದು ಜತೆ ಎತ್ತಿಗೆ ₹400 ಪಡೆಯುತ್ತೇವೆ. ಇತ್ತೀಚಿಗೆ ಎತ್ತುಗಳ ಸಂಖ್ಯೆ ಕಡಿಮೆ ಆಗುತ್ತಿದ್ದು, ಮುಂದಿನ ಪೀಳಿಗೆ ಈ ಕೆಲಸವನ್ನು ಇಷ್ಟಪಡುತ್ತಿಲ್ಲ. ಎಲ್ಲರೂ ವಿದ್ಯಾವಂತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕೆಲಸಗಾರರು ಸಿಗುವುದು ಕಷ್ಟ ಎಂದು ವರದಾಪುರ ಗ್ರಾಮ ಎತ್ತುಗಳ ಕೊಂಬು ಸ್ವಚ್ಛಗೊಳಿಸುವ ಕುಶಲಕರ್ಮಿ ನೂರ್‌ ಸಾಹೇಬ್‌ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೌನಾನುಷ್ಠಾನದಿಂದ ಆತ್ಮಬಲ ವೃದ್ಧಿ: ಬಸವಲಿಂಗ ಶ್ರೀಗಳು
ಕನ್ನಡ ಶಾಲೆ ಮುಚ್ಚಿದರೆ ಸಂಸ್ಕೃತಿ ನಾಶವಾದಂತೆ: ವಾಸರೆ