ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಾಲ್ಯ ವಿವಾಹದಿಂದ ಹೆಣ್ಣು ಮಕ್ಕಳು ದೈಹಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಶೋಷಣೆಗೆ ಒಳಗಾಗುತ್ತಿರುವುದರಿಂದ ಭವಿಷ್ಯ ಕುಂಠಿತಗೊಳ್ಳಲಿದ್ದು, ಇದನ್ನು ತಡೆಯುವಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ನಿಕಟ ಪೂರ್ವ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಹೇಳಿದರು.ತಾಲೂಕಿನ ಅಮಚವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಆರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯದಲ್ಲಿಯೇ ಮದುವೆ ಮಾಡುವುದು ಅಪರಾಧ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಹಾಗೂ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳ ವಿವಾಹ ಮಾಡುವುದು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಪ್ರಕಾರ ಅಪರಾಧವಾಗಲಿದೆ. ಇದರಿಂದ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುವುದರ ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗಲಿದೆ ಎಂದರು.ವಿದ್ಯಾರ್ಥಿಗಳ ಮೇಲೆ ಇತ್ತೀಚಿನ ದಿನಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ದೌರ್ಜನ್ಯವಾಗದಂತೆ ಜಾಗೃತರಾಗಿ, ಸಮಾಜದ ಇತರರಿಗೂ ದೌರ್ಜನ್ಯ ಪ್ರಕರಣಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಉಪನ್ಯಾಸಕ ಸುರೇಶ್ ಎನ್. ಋಗ್ವೇದಿ ಪ್ರಾಸ್ತವಿಕವಾಗಿ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದು, ಈ ಕಾನೂನುಗಳ ಅರಿವು ಪಡೆದು ಸದುಪಯೋಗ ಹೊಂದಬೇಕು ಎಂದರು. ವಕೀಲೆ ವಿದ್ಯಾಲತಾ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಣ್ಣು ಗಂಡು ಇಬ್ಬರು ಸಮಾನರು. ವಿದ್ಯಾರ್ಥಿ ಜೀವನದ ಭವಿಷ್ಯ ರೂಪಿಸಿಕೊಳ್ಳಲು ಇದು ಸಕಾಲ. ವಿದ್ಯಾರ್ಥಿಗಳು ಪ್ರೀತಿ ಪ್ರೇಮದ ಆಕರ್ಷಣೆಗೆ ಒಳಗಾಗಬಾರದು. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೆ ಓದಿನ ಕಡೆ ಗಮನಹರಿಸಿ ಜೀವನದಲ್ಲಿ ಸಾಧನೆ ಮಾಡಬೇಕು. ತಂದೆ ತಾಯಿ ಕಂಡ ಕನಸುಗಳನ್ನು ಸಾಕಾರಗೊಳಿಸಬೇಕೆಂದು ತಿಳಿಸಿದರು.ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಟಿ.ಜೆ.ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನಲ್ಲಿ ಜಾಗೃತರಾಗಿ ಹೆಜ್ಜೆ ಇಡಬೇಕು. ಕೆಟ್ಟ ಆಲೋಚನೆಯಿಂದ ದೂರವಿದ್ದು, ಒಳ್ಳೆಯದರ ಕಡೆ ಗಮನ ಹರಿಸಿ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಆರ್.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಾಠ ಪ್ರವಚನದ ಜೊತೆಗೆ ಕಾನೂನಿನ ಅರಿವು ಪಡೆದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಹಾಯಕ ಗ್ರಂಥ ಪಾಲಕ ಶಿವಕುಮಾರ್, ಉಪನ್ಯಾಸಕರಾದ ಪಿ.ಶಿವಸ್ವಾಮಿ, ಆರ್.ಬಸವಣ್ಣ, ಬಿ.ಎನ್. ರಮೇಶ್, ಸುರೇಶ್ ಯುವ ಸ್ಪಂದನ ಕೇಂದ್ರದ ಪರಿವರ್ತಕ ಗುರುರಾಜ್ ಇತರರು ಕಾರ್ಯಕ್ರಮದಲ್ಲಿ ಇದ್ದರು.