ಸರ್ವೇ ಲೋಪ, ನೀರಾವರಿ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚೆ: ಶಾಸಕ ಕೆ.ಎಂ.ಉದಯ್

KannadaprabhaNewsNetwork |  
Published : Jul 20, 2024, 12:54 AM IST
17ಕೆಎಂಎನ್ ಡಿ18 | Kannada Prabha

ಸಾರಾಂಶ

ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಧಿಕಾರವಧಿಯ ನಂತರ ಆತಗೂರು ಹೋಬಳಿಯ ರೈತರ ಜಮೀನುಗಳ ಮರು ಸರ್ವೇ ಕಾರ್ಯದಲ್ಲಿ ಸಾಕಷ್ಟು ಲೋಪ ದೋಷಗಳು ಉಂಟಾಗಿವೆ. ಇದರಿಂದ ರೈತರು ದಿನನಿತ್ಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಹಾಗೂ ಸರ್ವೆ ಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆತಗೂರು ಹೋಬಳಿ ಜಮೀನುಗಳ ಮರು ಸರ್ವೆ ಕಾರ್ಯದಲ್ಲಿ ಉಂಟಾಗಿರುವ ಲೋಪ ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಲು ಅವಕಾಶ ಕೋರಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ತಾಲೂಕಿನ ಚಾಮನಹಳ್ಳಿ ಹಾಗೂ ಮುದಿಗೆರೆ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅಧಿಕಾರವಧಿಯ ನಂತರ ಆತಗೂರು ಹೋಬಳಿಯ ರೈತರ ಜಮೀನುಗಳ ಮರು ಸರ್ವೇ ಕಾರ್ಯದಲ್ಲಿ ಸಾಕಷ್ಟು ಲೋಪ ದೋಷಗಳು ಉಂಟಾಗಿವೆ. ಇದರಿಂದ ರೈತರು ದಿನನಿತ್ಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಹಾಗೂ ಸರ್ವೆ ಕಚೇರಿಗಳಿಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಮೀನುಗಳ ಸರ್ವೇ ಕಾರ್ಯದ ಲೋಪಗಳನ್ನು ಸರಿಪಡಿಸುವಲ್ಲಿ ಇದುವರೆಗೆ ಕ್ಷೇತ್ರದಲ್ಲಿ ಆಯ್ಕೆಯಾದ ಯಾವುದೇ ಜನಪ್ರತಿನಿಧಿಗಳು ಪ್ರಯತ್ನ ನಡೆಸಿಲ್ಲ. ನನ್ನ ಶಾಸಕ ಸ್ಥಾನದ ಅವಧಿಯಲ್ಲಾದರೂ ಜಮೀನು ಸರ್ವೇ ಕಾರ್ಯದ ಲೋಪ ಸರಿಪಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ಲೋಪಕ್ಕೆ ಮುಕ್ತಾಯ ಹಾಡಬೇಕೆಂಬ ಛಲ ತೊಟ್ಟಿದ್ದೇನೆ ಎಂದರು.

ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ ಎನ್ನುವುದು ಸಾಮಾನ್ಯ ದೂರಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಕೊನೆ ಪ್ರದೇಶದ ಜಮೀನುಗಳಿಗೆ ನೀರು ಹರಿದ ನಂತರ ನಾಲೆಗಳ ಮೂಲಕ ಮೇಲ್ಭಾಗದ ಜಮೀನುಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲೆಗಳ ಆಧುನೀಕರಣಕ್ಕೆ ಅಗತ್ಯ ಅನುದಾನ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತ್ತೊಮ್ಮೆ ಸದನದಲ್ಲಿ ಪ್ರಸ್ತಾಪ ಮಾಡಿ ಜಲಸಂಪನ್ಮೂಲ ಸಚಿವರನ್ನು ಒತ್ತಾಯಿಸುವುದಾಗಿ ಆಶ್ವಾಸನೆ ನೀಡಿದರು.

ಕ್ಷೇತ್ರದಲ್ಲಿ ತೆಂಗಿನ ಮರಗಳಿಗೆ ತಲೆದೋರಿರುವ ಕಪ್ಪು ತಲೆ ಹುಳುವಿನ ರೋಗವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಸದನದಲ್ಲಿ ಪ್ರಸ್ತಾಪ ಮಾಡಿ ಪರಿಹಾರ ಕಂಡು ಕೊಳ್ಳಲಾಗುವುದು ಎಂದರು.

ಈ ವೇಳೆ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಗ್ರಾಪಂ ಸದಸ್ಯ ಜಗ್ಗ, ಮುಖಂಡರಾದ ಅಶೋಕ್‌, ಚೇಲ, ಶೇಖರ್, ತ್ಯಾಗರಾಜು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ