ಕನ್ನಡಪ್ರಭ ವಾರ್ತೆ ಹಿರಿಯೂರು: ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುವುದರಿಂದ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನು ತಡೆಗಟ್ಟಬೇಕಿದೆ ಎಂದು ಪೌರಾಯುಕ್ತ ವಾಸಿಂ ರವರು ಹೇಳಿದರು.
ಪ್ಲಾಸ್ಟಿಕ್ ಬಳಕೆ ನಿಷಿದ್ಧವಾಗಿದ್ದು, ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಅನೇಕ ಮಾರಣಾಂತಿಕ ರೋಗಗಳು ಹರಡುವ ಸಂಭವವಿದೆ. ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ನಗರದಲ್ಲಿರುವ ಬೀಡಾಡಿ ದನ ಕರುಗಳು ತಿಂದು ಸಾವನ್ನಪ್ಪುತ್ತವೆ. ಹಾಗಾಗಿ ನಗರದ ಜನತೆ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಅರಿತು ನಗರವನ್ನು ಮತ್ತು ನಗರದ ಆರೋಗ್ಯದ ವೃದ್ಧಿಗೆ ಸಹಕರಿಸಬೇಕು ಎಂದರು.
ನಗರಸಭಾಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ನಗರದ ಜನತೆ ಪ್ಲಾಸ್ಟಿಕ್ಕನ್ನು ಬಳಸದೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಗರವನ್ನು ಸ್ವಚ್ಛವಾಗಿಡಲು ಜನತೆ ನಮ್ಮ ಜೊತೆ ಕೈಜೋಡಿಸಬೇಕು. ಅಷ್ಟೇ ಅಲ್ಲ ಪ್ಲಾಸ್ಟಿಕ್ ಬಳಕೆಯನ್ನು ಇಂದಿನಿಂದಲೇ ನಿಲ್ಲಿಸಿ ದಿನಸಿ ಪದಾರ್ಥಗಳು, ಹಣ್ಣು ಹಾಗೂ ಇನ್ನಿತರ ವಸ್ತುಗಳನ್ನು ಕೊಂಡೊಯ್ಯಲು ಬಟ್ಟೆ ಬ್ಯಾಗುಗಳನ್ನು ಬಳಸುವ ನಿರ್ಧಾರ ಮಾಡಿ ಎಂದು ಕರೆ ನೀಡಿದರು.ಸುಂದರ ಹಾಗೂ ಆರೋಗ್ಯಯುತ ನಗರ ನಿರ್ಮಾಣಕ್ಕೆ ನಾಗರೀಕರೆಲ್ಲರೂ ಕೈ ಜೋಡಿಸಬೇಕು ಎಂದರು. ಸೂರ್ಯೋದಯ ಜಾನಪದ ಸಾಂಸ್ಕೃತಿಕ ಕಲಾತಂಡದ ವತಿಯಿಂದ ಪ್ಲಾಸ್ಟಿಕ್ ಬಳಕೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕ ಸಿಬ್ಬಂದಿಗಳು, ಬೀದಿ ನಾಟಕ ಕಲಾವಿದರಾದ ಎಚ್ ಎಸ್. ಮಾರುತೇಶ್, ಆಶಾ, ಲತಾ, ಭಾಸ್ಕರ್, ಚನ್ನಪ್ಪ, ಯಲ್ಲಪ್ಪ, ಸಿದ್ದೇಶ್ ಮುಂತಾದವರು ಹಾಜರಿದ್ದರು.