ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. 1949ರಲ್ಲಿ ಆರಂಭಗೊಂಡು ಇಂದು 75 ವರ್ಷ ಪೂರೈಸಿ ವಜ್ರಮಹೋತ್ಸವ ಆಚರಿಸುತ್ತಿದೆ. ಇದಕ್ಕೆ ಮುಖ್ಯವಾಗಿ ಸಹಕಾರಿಗಳು, ರೈತರು ಹಾಗೂ ಸಂಘದ ಇತಿಹಾಸದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಯ ಶ್ರಮದ ಸೇವೆಯೇ ಕಾರಣವಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಗುರುವಾರ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನ ಆವರಣದಲ್ಲಿ ಹಮ್ಮಿಕೊಂಡಿದ್ದ ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ. (ಟಿಎಪಿಸಿಎಂಎಸ್)ನ ವಜ್ರಮಹೋತ್ಲವ ಹಾಗೂ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟನೆ ಹಾಗೂ ವಜ್ರಮೋತ್ಸವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಇಂದು ಟಿಎಪಿಸಿಎಂಎಸ್ ಲಾಭದಲ್ಲಿದೆ. ವಾಣಿಜ್ಯ ಮಳಿಗೆಗೆಳ ಬಾಡಿಗೆ, ರಸಗೊಬ್ಬರ ಮಾರಾಟದಿಂದ ಬಂದ ಹಣದಿಂದ ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ. ರಾಜ್ಯದ 31 ಟಿಎಪಿಸಿಎಂಎಸ್ ಸಂಘಗಳಿಗೆ ಎಷ್ಠು ಗೊಬ್ಬರ ಬೇಕು ಎಂಬ ಮಾಹಿತಿ ಪಡೆದು ನಂತರ ಫೆಡರೇಷನ್‌ನಿಂದ ದಾಸ್ತಾನು ಮಾಡಲಾಗುತ್ತದೆ. ಆದರೆ, ಈ ವರ್ಷ ಅವಧಿಗೆ ಮುನ್ನವೇ ಅಧಿಕ ಮಳೆಯಾದ ಕಾರಣ ರೈತರು ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಬಳಸಿದ್ದರಿಂದ ಕೊರತೆಯಾಗಿದೆ. ಮುಂದಿನ ವರ್ಷ ಇದನ್ನು ಸರಿಪಡಿಸಲಾಗುವುದು ಎಂದರು.ಸಹಕಾರಿ ಸಂಘದ ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ 75 ವರ್ಷ ಯಶಸ್ವಿಯಾಗಿ ಪೂರೈಸಿದ ಟಿಎಪಿಸಿಎಂಎಸ್ ಮುಂದೆ ಶತಮಾನೋತ್ಸವ ಆಚರಿಸಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಎಚ್.ಸಿ. ಶೇಖರಪ್ಪ ಮಾತನಾಡಿ, ಸಂಸ್ಥೆಯು 2024-25ನೇ ಸಾಲಿಗೆ ನಿವ್ವಳ ₹550080-00 ಲಾಭ ಗಳಿಸಿದೆ. ಆದಾಯ ಹೆಚ್ಚಿಸಲು ಹೊಸ ಯೋಜನೆಗಳನ್ನು ಹಾಕಿಕೊಂಡು, ಪೂರ್ಣ ಪ್ರಮಾಣದಲ್ಲಿ ದುಡಿಯಲು ಸಜ್ಜಾಗುವಂಥ ವ್ಯವಸ್ಥೆ ಮಾಡಿದೆ ಎಂದು ಹೇಳಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುರಿಗೇಶಪ್ಪ ವರದಿ ವಾಚಿಸಿದರು. ಎ. ವರ್ಗದ ಸದಸ್ಯರು 7 ಜನರಿದ್ದು, ಬಿ. ವರ್ಗದಲ್ಲಿ 6 ಜನ, ನಾಮನಿರ್ದೇಶಿತ ಸದಸ್ಯರು 3 ಜನರಿದ್ದಾರೆ. ರಸಗೊಬ್ಬರ, ಬಿತ್ತನೆಬೀಜ, ಔಷಧಗಳನ್ನು ಮಾರಾಟ ಮಾಡಲಾಗುತ್ತಿದ್ದು, ರೈತರು ಖರೀದಿಸಲು ಹಾಗೂ ಸಂಘದ ಮಿಲ್‌ನಲ್ಲಿಯೇ ಬತ್ತ ಹಲ್ಲಿಂಗ್ ಮಾಡಿಸಿ, ಸಂಸ್ಥೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಅಲ್ಲದೇ, ಸದಸ್ಯರು ಕೇಳಿದ ಪ್ರಶ್ನಗಳಿಗೆ ಉತ್ತರಿಸಿದರು.
ಮುಖ್ಯ ಅತಿಥಿಗಳಾಗಿದ್ದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಡಿ.ಎಸ್. ಸುರೇಂದ್ರ ಗೌಡ, ದಾವಣಗೆರೆ ಡಿಸಿಸಿಬಿ ನಿರ್ದೇಶಕರಾದ ಜೆ.ಆರ್.ಷಣ್ಮುಖಪ್ಪ, ಕೆ.ಎಚ್. ಷಣ್ಮುಖಪ್ಪ, ಎಚ್.ಎ. ಉಮಾಪತಿ, ಸಂಸ್ಥೆ ಉಪಾಧ್ಯಕ್ಷ ಕೆ.ಚೇತನ್, ಸದಸ್ಯರು, ವರದರಾಜಪ್ಪಗೌಡ, ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಇತರರು ಇದ್ದರು.ಟಿ.ಎಂ. ರಸ್ತೆಯ ಮಳಿಗೆಗಳನ್ನು ರಸ್ತೆ ಅಗಲೀಕರಣದ ಕಾರಣ ಒಡೆದುಹಾಕಿದ್ದು, ಭೂಸ್ವಾಧೀನ ಪ್ರಕ್ರಿಯೆಯಿಂದ ಸಂಘಕ್ಕೆ ₹33 ಲಕ್ಷ ಬಂದಿದೆ. ಸಂಘದ ಲಾಭಾಂಶ ಸೇರಿ ₹40 ಲಕ್ಷ ಇದೆ. ಕಟ್ಟಡ ನಿರ್ಮಾಣಕ್ಕೆ ₹1 ಕೋಟಿ ವೆಚ್ಚದ ಯೋಜನೆ ತಯಾರಿಸಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ನಿರ್ಮಾಣ ವಿಳಂಬವಾಗಿದೆ. ಶೀಘ್ರದಲ್ಲಿ ಕಟ್ಟಡ ನಿರ್ಮಾಣ ಆರಂಭಗೊಳ್ಳುವ ಜೊತೆಗೆ ಸಂಘದ ಹಿಂಭಾಗದಲ್ಲಿರುವ ಸುಂಕದಕಟ್ಟೆ ರಸ್ತೆ ಎದುರಿನ ಆವರಣದಲ್ಲಿಯೂ ನೂತನ ಮಳಿಗೆಗಳನ್ನು ನಿರ್ಮಿಸಲಾಗುವುದು. -ಡಿ.ಜಿ.ಶಾಂತನಗೌಡ, ಶಾಸಕ, ಹೊನ್ನಾಳಿ ಕ್ಷೇತ್ರ.