ನಗರಸಭೆ ಮೀಸಲಾತಿಯತ್ತ ಎಲ್ಲರ ಚಿತ್ತ

KannadaprabhaNewsNetwork | Published : Jul 31, 2024 1:16 AM

ಸಾರಾಂಶ

ಈಗಾಗಲೇ ಸಾಮಾನ್ಯ ಸ್ಥಾನಕ್ಕೆ ಮೀಸಲಾತಿ ಬಂದು ಹೋಗಿದೆ, ಹೀಗಾಗಿ ಆರ್ಥಿಕವಾಗಿ ಹಿಂದುಳಿದವರು (3ಬಿ) ಗೆ ಮೀಸಲಾತಿ ನಿಗದಿಯಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹಲವು ಜನರಿದ್ದಾರೆ.

ಶಿವಕುಮಾರ ಕುಷ್ಟಗಿ ಗದಗ

ಗದಗ-ಬೆಟಗೇರಿ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಜು. 24 ಕ್ಕೆ ಪೂರ್ಣಗೊಂಡಿದ್ದು, 2ನೇ ಅವಧಿಗೆ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ನಿಗದಿ ಮಾಡುವ ಮೀಸಲಾತಿಯತ್ತ ಎಲ್ಲರ ಚಿತ್ತ ನೆಟ್ಟಿದ್ದು, ಅವಳಿ ನಗರದಾದ್ಯಂತ ಮೀಸಲಾತಿಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

ನಗರಸಭೆಯಲ್ಲಿ ಬಹುಮತ ಹೊಂದಿರುವ ಆಡಳಿತಾರೂಢ ಬಿಜೆಪಿ ಸದಸ್ಯರು ಕಳೆದ 30 ವರ್ಷಗಳಲ್ಲಿ ಬಂದು ಹೋಗಿರುವ ಮೀಸಲಾತಿ ಪಟ್ಟಿ ಹಿಡಿದು ಮುಂದಿನ ಮೀಸಲಾತಿ ಬಗ್ಗೆ ತಮ್ಮದೆ ಆದ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಮೀಸಲಾತಿ ರೋಸ್ಟರ್ ವಿಚಾರ ಹೈಕೋರ್ಟ್ ನಲ್ಲಿದೆ. ಆದರೆ ಮುಂದಿನ ತಮ್ಮ ನಡೆ ಹೇಗಿರಬೇಕು ಎನ್ನುವ ಬಗ್ಗೆ ವಿಶೇಷ ಗಮನ ನೀಡುತ್ತಿದ್ದಾರೆ. ಇನ್ನು ಕೆಲ ಜನ ಸದಸ್ಯರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ.

ಇವರಿಗೆ ಸಿಕ್ಕಲ್ಲವಂತೆ: ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಗದಗ ಪ್ರತ್ಯೇಕ ಜಿಲ್ಲೆಯಾದ ನಂತರ ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ಬ, ಹಿಂದುಳಿದ ಬ (ಮಹಿಳೆ), ಹಿಂದುಳಿದ ಅ (ಮಹಿಳೆ) ಎಸ್ ಸಿ (ಮಹಿಳೆ) ಮತ್ತು ಎಸ್ ಟಿ ವರ್ಗದವರಿಗೆ ಅವಕಾಶ ಸಿಕ್ಕಿಲ್ಲ, ಹೀಗಾಗಿ ಈ ಮೀಸಲಾತಿಯಲ್ಲಿ ಆಯ್ಕೆಯಾದವರಲ್ಲಿ ಅಧ್ಯಕ್ಷ ಸ್ಥಾನದ ಆಸೆ ಚಿಗುರೊಡೆದಿದ್ದು, ಅದಕ್ಕಾಗಿ ಅವರೆಲ್ಲ ಸದ್ದಿಲ್ಲದೇ ತಂತ್ರಗಾರಿಕೆ ಕೂಡಾ ನಡೆಸಿದ್ದಾರೆ.

ಈ ಮಧ್ಯೆ ಈಗಾಗಲೇ ಸಾಮಾನ್ಯ ಸ್ಥಾನಕ್ಕೆ ಮೀಸಲಾತಿ ಬಂದು ಹೋಗಿದೆ, ಹೀಗಾಗಿ ಆರ್ಥಿಕವಾಗಿ ಹಿಂದುಳಿದವರು (3ಬಿ) ಗೆ ಮೀಸಲಾತಿ ನಿಗದಿಯಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹಲವು ಜನರಿದ್ದಾರೆ. ಇದರ ಮಧ್ಯೆ ಅಧ್ಯಕ್ಷ ಮೀಸಲಾತಿ ಸಾಮಾನ್ಯ, ಹಿಂದುಳಿದ ಅ, ಎಸ್ಸಿ (ಮಹಿಳೆ), ಎಸ್ ಟಿಗೆ ಬರುತ್ತದೆ ಎನ್ನುವ ಪ್ರಬಲ ವಾದ ಕೂಡಾ ಕೆಲವರು ಮಂಡಿಸುತ್ತಿದ್ದು, ಇದರಿಂದ ಕಳೆದೊಂದು ವಾರದಿಂದ ಅವಳಿ ನಗರದಲ್ಲಿ ಅಧ್ಯಕ್ಷರ ಮೀಸಲಾತಿಯ ರಾಜಕೀಯ ಬಲು ಜೋರಾಗಿಯೇ ನಡೆಯುತ್ತಿದೆ.

ಆಕಾಂಕ್ಷಿಗಳು: ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಲ್ಲಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ, ಚಂದ್ರು ತಡಸದ, ಅನಿಲ ಅಬ್ಬಿಗೇರಿ, ವಿನಾಯಕ ಮಾನ್ವಿ ಮುಂಚೂಣಿಯಲ್ಲಿದ್ದಾರೆ. ಎಸ್ ಟಿ ಮೀಸಲಾತಿ ಬಂದರೆ 35 ವಾರ್ಡ್ ಪೈಕಿ 24 ನೇ ವಾರ್ಡ್‌ನ ಬಿಜೆಪಿ ಸದಸ್ಯ ಹಾಗೂ ಏಕೈಕ ಎಸ್ ಟಿ ಸದಸ್ಯ ನಾಗರಾಜ ತಳವಾರ ಅವರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

ಒಲಿಯುವುದೇ ಅದೃಷ್ಟ: ನಗರಸಭೆಯ 35 ವಾರ್ಡ್‌ಗಳಲ್ಲಿ 17 ವಾರ್ಡ್‌ಗಳಲ್ಲಿ ಕಾಂಗ್ರೆಸ್ 18 ವಾರ್ಡಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮತ ಎಣಿಕೆಯ ದಿನವೂ ಹಾವು ಏಣಿ ಆಟದಂತೆ ನಡೆದಿತ್ತು. 34 ವಾರ್ಡ್‌ಗಳ ಫಲಿತಾಂಶ ಅದಾಗಲೇ ಪ್ರಕಟವಾಗಿ ಕಾಂಗ್ರೆಸ್ 17 ಬಿಜೆಪಿ 17 ರಲ್ಲಿ ಗೆಲುವು ಸಾಧಿಸಿತ್ತು. ಆಗ ಪ್ರಾರಂಭವಾಗಿದ್ದೇ 35 ನೇ ವಾರ್ಡ್‌ನ ಮತ ಎಣಿಕೆ, ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಉಷಾ ದಾಸರ ಅತೀ ಹೆಚ್ಚು ಮತಗಳಿಂದ ಗೆಲ್ಲುವ ಮೂಲಕ ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿಗೆ ಬಹುಮತ ದೊರಕಿಸಿಕೊಟ್ಟು ಬಿಜೆಪಿ ಪಾಲಿನ ಅದೃಷ್ಟ ಲಕ್ಷ್ಮಿಯಾಗಿದ್ದಳು. ಅಧ್ಯಕ್ಷರ ಮೀಸಲಾತಿ ಕೂಡಾ ಎಸ್ಸಿಗೆ ಮೀಸಲಾದ ಹಿನ್ನೆಲೆಯಲ್ಲಿ ಉಷಾ ದಾಸರ ಮೊದಲ ಎರಡುವರೆ ವರ್ಷದ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ನಡೆಸಿದರು. 2 ನೇ ಅವಧಿಯ ಮೀಸಲಾತಿ ಎಸ್ ಸಿ (ಮಹಿಳೆ) ಬಂದರೆ ಉಷಾ ದಾಸರ ಮತ್ತೊಂದು ಅವಧಿಗೂ ಅಧ್ಯಕ್ಷರಾಗುವ ಸಾಧ್ಯತೆ ಇದ್ದು, ಈ ಬಾರಿಯೂ ಅದೃಷ್ಟ ಒಲಿಯುತ್ತಾ ಕಾಯ್ದು ನೋಡಬೇಕು.

ಒಂದು ವಾರದಲ್ಲಿ ಮೀಸಲಾತಿ ಕೊಡಿ: ಗದಗ-ಬೆಟಗೇರಿ ನಗರಸಭೆ ಸೇರಿದಂತೆ ರಾಜ್ಯದ 61 ಸ್ಥಳೀಯ ಸಂಸ್ಥೆಗಳ ಮೀಸಲಾತಿ ರೋಸ್ಟರ್ ನ್ನು ನಿಗದಿ ಮಾಡಿದೆ. ಅದರ ಪ್ರತಿ ಹೈಕೋರ್ಟಗೆ ನೀಡಿದೆ. ಅದರ ಆಧಾರದಲ್ಲಿ ಮುಂಬರುವ ವಾರದಲ್ಲಿ ಮೀಸಲಾತಿ ಪ್ರಕಟಿಸುವಂತೆ ಕೋರ್ಟ ಸರ್ಕಾರಕ್ಕೆ ಸೂಚನೆ ನೀಡಿದೆ ಎನ್ನಲಾಗಿದ್ದು. ಸಧ್ಯದಲ್ಲಿಯೇ ಅಧ್ಯಕ್ಷ-ಉಫಾಧ್ಯಕ್ಷರ ಮೀಸಲಾತಿ ಅಂತಿಮಗೊಳ್ಳು ಸಾಧ್ಯತೆ ಇದೆ.

ಅಧ್ಯಕ್ಷರಾದವರ ವಿವರ: 1997 ಸಾಮಾನ್ಯ ಮಹಿಳೆ ಭುವನೇಶ್ವರಿ ಕೆ, 1999 ಎಸ್ಸಿ ಮಹಿಳೆ ನಾಗರತ್ನಾ ಮುಳಗುಂದ, 2000-04 ಸಾಮಾನ್ಯ ಗೋಡಬೊಲೆ, ಎಲ್.ಡಿ. ಚಂದಾವರಿ, 2004-07 ಅ ವರ್ಗ ಪ್ರಕಾಶ, ಹನುಮಂತಪ್ಪ, 2008-09, ಸಾಮಾನ್ಯ ಮಹಿಳೆ ವಿಜಯಲಕ್ಷ್ಮೀ ಮಾನ್ವಿ, ಜಯಶ್ರೀ ಉಗಲಾಟ, 2009 ಸಾಮಾನ್ಯ ಶಿವಣ್ಣ ಮುಳಗುಂದ, 2013-16 ಸಾಮಾನ್ಯ ಮಹಿಳೆ ರುದ್ರಮ್ಮ ಕೆರಕಲಮಟ್ಟಿ, ಶಿವಲೀಲಾ ಅಕ್ಕಿ, 2017-19 ಸಾಮಾನ್ಯ ವರ್ಗ ಪೀರಸಾಬ್‌ ಕೌತಾಳ, ಬಿ.ಬಿ. ಅಸೂಟಿ, ಸುರೇಶ ಕಟ್ಟಿಮನಿ, 2021-24 ಎಸ್ ಸಿ ಉಷಾ ದಾಸರ ಆಯ್ಕೆಯಾಗಿದ್ದರು.

Share this article