ಭಾರತೀಯ ಸಂಸ್ಕೃತಿ ಮತ್ತು ಪಾರಂಪರ್ಯವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣ ದತ್ತ ಓಡೆಯರ್ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಸಿದ್ದಾಪುರ
ಭಾರತೀಯ ಸಂಸ್ಕೃತಿ ಮತ್ತು ಪಾರಂಪರ್ಯವನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಬದ್ಧರಾಗಬೇಕು ಎಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣ ದತ್ತ ಓಡೆಯರ್ ಕರೆ ನೀಡಿದರು.ಸಿದ್ದಾಪುರದ ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ನಡೆದ ಕೊಡಗು ಎಸ್‌ಎನ್‌ಡಿಪಿ ವನಿತಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ನಾರಾಯಣ ಗುರುಗಳ ಮೂಲ ತತ್ವ ಸಿದ್ಧಾಂತಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಆಶಯದಂತೆ ಸಂಘಟಿತರಾಗಿ ಶಕ್ತಿಶಾಲಿಗಳಾಗಬೇಕು ಹಾಗೂ ಸಮಾನತೆ ಮತ್ತು ಮಾನವೀಯತೆ ಆಧಾರಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.ಎಸ್‌ಎನ್‌ಡಿಪಿ ಸದಸ್ಯರು ಭಾರತೀಯ ಪಾರಂಪರಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕೃತಿಯನ್ನು ಕಾಪಾಡಿ ಬೆಳೆಸಲು ಶ್ರಮಿಸಬೇಕು. ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ಮಹಿಳಾ ಯೂನಿಯನ್ ಸಂಘಟನೆ ಭಾರತೀಯ ಸಂಸ್ಕೃತಿಯ ಬಲವರ್ಧನೆಗೆ ಸಹಕಾರಿ ಎಂದರು.ನಾರಾಯಣ ಗುರುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತನಗೆ ಸಂತಸ ತಂದಿದೆ ಎಂದು ತಿಳಿಸಿದ ಅವರು, ಕೇಂದ್ರ ಸರ್ಕಾರ ಕೇರಳದ ಶಿವಗಿರಿಯಲ್ಲಿ ರೈಲ್ವೆ ನಿಲ್ದಾಣ ಸ್ಥಾಪಿಸಿ ಸುಮಾರು 70 ಕೋಟಿ ರು. ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು. ಕೊಡಗಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದ್ದು, ಮೈಸೂರು ಕೊಡಗು ಭಾಗಗಳಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಕುಶಾಲನಗರವರೆಗೆ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು, ಕೆಲ ತಾಂತ್ರಿಕ ತೊಡಕುಗಳಿಂದ ಕಾಮಗಾರಿ ಕುಶಾಲನಗರವರೆಗೆ ಮಾತ್ರ ಸೀಮಿತವಾಗಿದೆ ಎಂದರು. ಜನರ ಬೇಡಿಕೆಯಂತೆ ಕೊಡಗಿನಲ್ಲಿ ಪಾಸ್‌ಪೋರ್ಟ್ ಕಚೇರಿ ತೆರೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಎಸ್‌ಎನ್‌ಡಿಪಿ ಸಂಘಟನೆಯ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಅವರು, ಕೇರಳದಲ್ಲಿ ಅಸ್ಪೃಶ್ಯತೆ ಹೆಚ್ಚಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಸಂಘಟನೆ ರೂಪುಗೊಂಡಿತು. ಸಮಾಜವನ್ನು ಮೇಲೆತ್ತಲು ಸಂಘಟನೆಯೇ ಮಾರ್ಗವೆಂದು ಅರಿತ ಗುರುಗಳು ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ ಎಲ್ಲರಿಗೂ ಶಿಕ್ಷಣ ದೊರಕುವಂತೆ ಕಾರ್ಯನಿರ್ವಹಿಸಿದರು. ಇಂದು ಕೇರಳ ರಾಜ್ಯ ಸಂಪೂರ್ಣ ಸಾಕ್ಷರತೆಯತ್ತ ಸಾಗಲು ನಾರಾಯಣ ಗುರುಗಳೇ ಕಾರಣರಾಗಿದ್ದಾರೆ. ಅವರು ರಾಜ್ಯಕ್ಕೆ ಮಾತ್ರ ಸೀಮಿತವಾಗದೆ ವಿಶ್ವಗುರುಗಳಾಗಿದ್ದಾರೆ ಎಂದರು.ಮಹಿಳೆಯರ ಒಗ್ಗೂಡುವಿಕೆಗೆ ಶಕ್ತಿ ತುಂಬುವ ಉದ್ದೇಶದಿಂದ ಮಹಿಳಾ ಸಂಘಟನೆ ರಚಿಸಲಾಗಿದೆ. ಕೊಡಗು ಎಸ್‌ಎನ್‌ಡಿಪಿ ಸಂಘಟನೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸಮಾಜದ ಸಾಧಕರು ಹಾಗೂ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗಿದೆ. ಸಂಘಟನೆಯ ಸದಸ್ಯೆ ಮಹಿಳೆಯರು ನಾಯಕತ್ವ ವಹಿಸಲು ಹಾಗೂ ರಾಜಕೀಯ ಕ್ಷೇತ್ರದಲ್ಲೂ ಮುಂದೆ ಬರಬೇಕು ಎಂದು ಆಗ್ರಹಿಸಿದರು. ವನಿತಾ ಯೂನಿಯನ್ ಅಧ್ಯಕ್ಷೆ ರೀಶಾ ಸುರೇಂದ್ರನ್ ಮಾತನಾಡಿ ವನಿತಾ ಯೂನಿಯನ ಎಲ್ಲಾ ಶಾಖೆಗಳಲ್ಲಿ ವನಿತಾ ಸಂಘಗಳನ್ನು ಪ್ರಾರಂಭಿಸಿ ಮಹಿಳೆಯರನ್ನು ಹೆಚ್ಚಾಗಿ ಸೇರಿಸಿ ಗುರುಗಳ ಆದರ್ಶ ತತ್ವಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿದರು.ಇದೇ ಸಂದರ್ಭ ಜಿಲ್ಲಾ ಯೂನಿಯನ್ ಗೆ ಜಿಲ್ಲೆಯ ವಿವಿಧ ಭಾಗಗಳ ಶಾಖೆಗಳ ಒಬ್ಬರಂತೆ ಪ್ರತಿನಿಧಿಗಳನ್ನು ಸೇರಿಸಲಾಯಿತು.ಕಾರ್ಯಕ್ರಮದಲ್ಲಿ ಎಸ್ ಎನ್ ಡಿ ಪಿ ಕೊಡಗು ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ, ಯೂನಿಯನ್ ಪ್ರಮುಖರಾದ ಶಂಕರ್ ಮೋಹನ್ ದಾಸ್, ಪಿ.ಸಿ. ನಾರಾಯಣ, ಸಿ.ವಿ. ನಾರಾಯಣ, ಮಾಜಿ ಉಪಾಧ್ಯಕ್ಷ ಸಜೀವನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.