ಹಾವೇರಿ: ಕರ್ನಾಟಕ ಕ್ಷತ್ರಿಯ ಒಕ್ಕೂಟ ಜಿಲ್ಲಾ ಘಟಕದ ನೇತೃತ್ವದಲ್ಲಿ ಫೆ. 28ರಂದು ಸಂಜೆ 4ಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ ಮೆಹರವಾಡೆ ಹೇಳಿದರು.
ಮೆರವಣಿಗೆ ಮಾರ್ಗ: ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು, ಮೇಲಿನಪೇಟೆ, ಸುಭಾಸ್ ಸರ್ಕಲ್, ಪುನಃ ಮೇಲಿನಪೇಟೆ ಮಾರ್ಗವಾಗಿ ದ್ಯಾಮವ್ವನಗುಡಿ ಪಾದಗಟ್ಟಿ, ಎಂ.ಜಿ. ರಸ್ತೆ, ಎಂ.ಜಿ. ವೃತ್ತ, ಜೆ.ಪಿ. ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗದಿಂದ ಶಿವಾಜಿನಗರದಲ್ಲಿರುವ ಮರಾಠಾ ಸಮುದಾಯ ಭವನ ತಲುಪಲಿದೆ. ಮೆರವಣಿಗೆಯಲ್ಲಿ ನಾಸಿಕ್ ಡೋಲು ತಂಡ ಭಾಗವಹಿಸಲಿದೆ. ಪುರುಷರು ಬಿಳಿ ಶರ್ಟ್, ಬಿಳಿ ಪ್ಯಾಂಟ್, ಜುಬ್ಬಾ, ಪೇಟಾ ಧರಿಸಲಿದ್ದು, ಮಹಿಳೆಯರು ಸೀರೆ, ಪೇಟಾ ಧರಿಸಿ ಗಮನಸೆಳೆಯಲಿದ್ದಾರೆ ಎಂದರು.
ಗಣ್ಯರು ಭಾಗಿ: ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮೈಲಾರ ಲಿಂಗೇಶ್ವರ ದೇವಸ್ಥಾನದ ವೆಂಕಪ್ಪ ಒಡೆಯರ್, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಚಾಲನೆ ನೀಡಲಿದ್ದಾರೆ. ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ ಸಿಂಗ್, ಶಾಸಕರಾದ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣವರ ಸೇರಿದಂತೆ ಜಿಲ್ಲೆಯ ಎಲ್ಲ ಹಾಲಿ, ಮಾಜಿ ಶಾಸಕರು, ಸಚಿವರು ಭಾಗವಹಿಸಲಿದ್ದಾರೆ. ಜತೆಗೆ ಹಿಂದೂಪರ ಸಂಘಟನೆಗಳ ಮುಖಂಡರು, ಶಿವಾಜಿ ಮಹಾರಾಜರ ಅಭಿಮಾನಿಗಳು, ಪಕ್ಷಾತೀತ ನಾಯಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ನಾಗರಾಜ ಜೋರಾಪುರಿ, ಯುವ ಒಕ್ಕೂಟದ ಗೌರವಾಧ್ಯಕ್ಷ ದರ್ಶನ ಲಮಾಣಿ ಮಾತನಾಡಿದರು.