ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದಿಂದ ಇರಬೇಕು: ಜಿ.ಟಿ. ದೇವೇಗೌಡ

KannadaprabhaNewsNetwork |  
Published : Sep 27, 2024, 01:18 AM IST
54 | Kannada Prabha

ಸಾರಾಂಶ

ಕರ್ನಾಟಕದ ಮಕ್ಕಳು ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದಿಂದ ಇರಬೇಕು ಎನ್ನುವ ಕಾರಣಕ್ಕಾಗಿ ಪೌಷ್ಟಿಕಾಂಶ ಒದಗಿಸುವ ಮೊಟ್ಟೆ ವಿತರಿಸಲು ಅಜೀಂ ಪ್ರೇಮ್ ಜೀ ಅವರು 1590 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರಕ್ಕೆ ನೀಡುವ ತೀರ್ಮಾನ ಮಾಡಿರುವುದು ಶ್ಲಾಘನೀಯ. ಬಡ ಮಕ್ಕಳ ಆರೋಗ್ಯಕ್ಕಾಗಿ ಇಷ್ಟೊಂದು ಪ್ರಮಾಣದ ಅನುದಾನ ನೀಡಿದ್ದರೆ ಅದು ಅಜೀಂ ಪ್ರೇಮ್ ಜೀ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದಿಂದ ಇರಬೇಕು. ಮುಂದಿನ ಭವಿಷ್ಯವನ್ನು ನಿರ್ಮಾಣಮಾಡುವ ಇಂದಿನ ಮಕ್ಕಳು ಆರೋಗ್ಯದಿಂದ ಇರಬೇಕಿದೆ ಎಂದು ಶಾಸಕ ಜಿ.ಟಿ. ದೇವೇಗೌಡ ಸಲಹೆ ನೀಡಿದರು.

ಬೋಗಾದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಪಂ ವತಿಯಿಂದ ಆಯೋಜಿಸಿದ್ದ ಪಿಎಂ ಪೋಷಣ- ಮಧ್ಯಾಹ್ನ ಉಪಹಾರ ಯೋಜನೆಯಡಿ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸುವ ಮೈಸೂರು ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಕರ್ನಾಟಕದ ಮಕ್ಕಳು ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದಿಂದ ಇರಬೇಕು ಎನ್ನುವ ಕಾರಣಕ್ಕಾಗಿ ಪೌಷ್ಟಿಕಾಂಶ ಒದಗಿಸುವ ಮೊಟ್ಟೆ ವಿತರಿಸಲು ಅಜೀಂ ಪ್ರೇಮ್ ಜೀ ಅವರು 1590 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರಕ್ಕೆ ನೀಡುವ ತೀರ್ಮಾನ ಮಾಡಿರುವುದು ಶ್ಲಾಘನೀಯ. ಬಡ ಮಕ್ಕಳ ಆರೋಗ್ಯಕ್ಕಾಗಿ ಇಷ್ಟೊಂದು ಪ್ರಮಾಣದ ಅನುದಾನ ನೀಡಿದ್ದರೆ ಅದು ಅಜೀಂ ಪ್ರೇಮ್ ಜೀ ಎಂದು ಬಣ್ಣಿಸಿದರು.

ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದಾಗ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ್ದರು. ಸಿದ್ದರಾಮಯ್ಯ ಅವರು ಸಿಎಂ ಆದ ನಂತರ ಕೆನೆಭರಿತ ಹಾಲು, ಎರಡು ದಿನಗಳ ಕಾಲ ಮೊಟ್ಟೆ, ಶೂ-ಸಾಕ್ಸ್ ನೀಡಲು ಶುರು ಮಾಡಿದ್ದರು. ಈಗ ವಾರದಲ್ಲಿ ಆರು ದಿನಗಳಲ್ಲೂ ಮೊಟ್ಟೆ ವಿತರಿಸುವುದಕ್ಕೆ ಅಜೀಂ ಅವರು ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮಕ್ಕಳು ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದ ಬೆಳವಣಿಗೆ, ಶಕ್ತಿಯುತ, ಪೌಷ್ಟಿಕವಾಗಿ ಇರಲು ಮೊಟ್ಟೆ ಸಹಕಾರಿಯಾಗಿದೆ. ಮಕ್ಕಳು ಭವಿಷ್ಯದ ಉತ್ತಮ ಪ್ರಜೆಗಳಾಗಬೇಕು. ಮಕ್ಕಳು ಬರೀ ಶಿಕ್ಷಣ ಪಡೆಯುವುದಕ್ಕೆ ಸೀಮಿತವಾಗದೆ, ವಿದ್ಯಾವಂತರಾಗಿ, ಉದ್ಯೋಗಪಡೆಯಬೇಕು. ಒಳ್ಳೆಯ ನಡತೆ, ನಡವಳಿಕೆ ಹೊಂದಿ ಶಾಲೆ, ತಂದೆ-ತಾಯಿ, ಸಮಾಜಕ್ಕೆ ಕೀರ್ತಿ ತರಬೇಕು ಎಂದು ಅವರು ಕಿವಿಮಾತು ಹೇಳಿದರು.

ಬಡವರ ಮಕ್ಕಳು ಮೊದಲು ಶಾಲೆಗೆ ಹೋಗುವುದು ದುಸ್ತರವಾಗಿತ್ತು. ಈಗ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಸಮವಸ್ತ್ರ, ಪಠ್ಯಪುಸ್ತಕ ನೀಡಲು ಆರಂಭಿಸಿದ್ದರಿಂದ ಲಕ್ಷಾಂತರ ಮಕ್ಕಳಿಗೆ ನೆರವಾಯಿತು. ಬಿಸಿಯೂಟ ಜಾರಿಯಾದ ಮೇಲೆ ಮತ್ತಷ್ಟು ಅನುಕೂಲವಾಯಿತು. ಈಗ ಪೌಷ್ಟಿಕಾಂಶವುಳ್ಳ ಆಹಾರ, ಹಾಲು, ಮೊಟ್ಟೆ ವಿತರಿಸುತ್ತಿರುವುದರಿಂದ ಶಿಕ್ಷಣದ ಜತೆಗೆ ಆರೋಗ್ಯದಿಂದ ಇರುವುದಕ್ಕೆ ದಾರಿಯಾಗಿದೆ. ಮೊಟ್ಟೆಯನ್ನು ಕಡ್ಡಾಯವಾಗಿ ತಿಂದರೆ ಶಕ್ತಿ ಬರಲಿದೆ. ಮೊಟ್ಟೆ ಮಾಂಸಹಾರಿ ಅಲ್ಲ, ಶಾಖಾಹಾರಿಯಾಗಿರುವ ಕಾರಣ ತಿನ್ನಬಹುದು ಎಂದರು.

ಮಕ್ಕಳು ಕಡ್ಡಾಯವಾಗಿ ಯೋಗ ಮಾಡಬೇಕು. ಕ್ರೀಡಾಚಟುವಟಿಕೆಯಲ್ಲಿ ಭಾಗಿಯಾಗಬೇಕು. ಶಿಕ್ಷಕರು ಸಾಧ್ಯವಾದಷ್ಟು ಮಟ್ಟಿಗೆ ಬೆಳಗ್ಗೆ ಅಥವಾ ಸಂಜೆ ಯೋಗ ಹೇಳಿಕೊಟ್ಟರೆ ಉತ್ತಮವಾಗಲಿದೆ. ಇದಕ್ಕೆ ಬೇಕಾದ ನೆರವನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಶಾಸಕನಾದ ಮೇಲೆ ರಾಜಕೀಯ, ಜಾತಿ, ಪಕ್ಷ ಯಾವುದೂ ಇಲ್ಲದೆ ಕ್ಷೇತ್ರದ ಎಲ್ಲಾ ಶಾಲೆಗಳ ಅಭಿವೃದ್ಧಿಗೆ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದೇನೆ. ಮಕ್ಕಳು ಬರೀ ಪದವಿ ಪಡೆಯಲು ಸೀಮಿತವಾಗದೆ ವೈದ್ಯರು, ಎಂಜಿನಿಯರ್, ಐಎಎಸ್, ಐಪಿಎಸ್ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ಮಕ್ಕಳು ಸುಳ್ಳು ಹೇಳಬಾರದು. ಯಾವಾಗಲೂ ಸತ್ಯಹೇಳಬೇಕು. ನಿಜವಾಗಿ ತಂದೆ- ತಾಯಿಗೆ ಕೈ ಮುಗಿದು ಶಾಲೆಗೆ ಬರಬೇಕು. ಸತ್ಯ ಹೇಳಲು ಹೆದರಬಾರದು. ಯಾವಾಗಲೂ ಸತ್ಯಕ್ಕೆ ಜಯವಿರುತ್ತದೆ. ಸುಳ್ಳು ಸತ್ತುಹೋಗಿ ಬಿಡುತ್ತದೆ ಎಂದು ಮಕ್ಕಳಿಗೆ ನೀತಿಪಾಠ ಹೇಳಿದರು.

ಕ್ಷೇತ್ರದಲ್ಲಿನ ಹಿರಿಯ, ಪ್ರಾಥಮಿಕ ಶಾಲೆಗಳಿಗೆ ಬೇಕಾದ ಕೊಠಡಿ, ಮೂಲ ಸೌಕರ್ಯ, ಅಡುಗೆ ಕೋಣೆ, ಕುಡಿಯುವ ನೀರಿನ ಘಟಕ ಒದಗಿಸಲಾಗಿದೆ. ಮುಂದೆಯೂ ಕೂಡ ಶಾಲೆಗಳಿಗೆ ಬೇಕಾದ ಸೌಕರ್ಯ ಒದಗಿಸಲು ಗಮನಹರಿಸುವೆ ಎಂದರು.

ಬಳಿಕ ಮಕ್ಕಳೊಂದಿಗೆ ವಿವಿಧ ಪ್ರಶ್ನೆ ಕೇಳುವ ಮೂಲಕ ಸಂವಾದ ನಡೆಸಿದರು. ಬಿಇಒ ಎಂ. ಪ್ರಕಾಶ್, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ವಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ. ಮಾಲೇಗೌಡ, ಕೇರ್ಗಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಹದೇವ, ಬೋಗಾದಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಿಂಗರಾಜು, ಬೋಗಾದಿ ಸಿ.ಆರ್.ಪಿ ವಿದ್ಯಾ, ಗ್ರಾಪಂ ಮಾಜಿ ಸದಸ್ಯರಾದ ಚಂದ್ರಶೇಖರ್, ನಾಗೇಶ್, ಆನಂದ್, ಆರೋಗ್ಯ ಮೇರಿ, ಬಾಬು, ನಿರ್ಮಲಾ ಶಿವಲಿಂಗಸ್ವಾಮಿ, ಪ್ರಶಾಂತ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆ.ಎಸ್.ಪುಟ್ಟಣ್ಣಯ್ಯ ಆದರ್ಶ ಎಲ್ಲಾ ಕಾಲಕ್ಕೂ ಮಾದರಿ, ಅನುಸರಣೀಯ: ನಾಗತಿಹಳ್ಳಿ ಚಂದ್ರಶೇಖರ್
ಮೇಲುಕೋಟೆ: ಶ್ರೀದೇವಿ ಭೂದೇವಿಯರಿಗೆ ನೂರ್ ತಡಾ ಉತ್ಸವ