ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು: ಸಚಿವ ಸಂತೋಷ್ ಲಾಡ್

KannadaprabhaNewsNetwork |  
Published : Sep 01, 2025, 01:03 AM IST
3 | Kannada Prabha

ಸಾರಾಂಶ

ಮುಂದಿನ ದಿನಗಳ ರಾಜಕೀಯ ಶಕ್ತಿ ನಿಮಗೆ ವೃದ್ಧಿ ಆಗಲಿಕ್ಕೆ ಒಗ್ಗಟ್ಟು ಕಾರಣವಾಗುತ್ತದೆ. ಎಲ್ಲಾ ಬುಡಕಟ್ಟು ಸಮಾಜದವರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಬರೀ ಶಾಲೆಗೆ ಕಳುಹಿಸುವುದಲ್ಲ ಉನ್ನತ ಶಿಕ್ಷಣದವರೆಗೆ ಓದಿಸುವುದಕ್ಕೆ ನಿಮ್ಮ ಪ್ರೋತ್ಸಾಹ ಸದಾ ಅವರೊಂದಿಗೆ ಇರಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನಿಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ಸಮಾಜದ ಏಳಿಗೆಗೆ ಎಲ್ಲಾ ಸಮುದಾಯವರು ಒಗ್ಗಟ್ಟಿನಿಂದ ಇರಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದರು.

ನಗರದ ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ನುಲಿಯ ಚಂದಯ್ಯ ಜಯಂತಿ ಸಮಿತಿ, ಮೈಸೂರು ಜಿಲ್ಲಾ ಕೊರಮ- ಕೊರಚ ಮಹಾ ಸಂಘ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಮುಂದಿನ ದಿನಗಳ ರಾಜಕೀಯ ಶಕ್ತಿ ನಿಮಗೆ ವೃದ್ಧಿ ಆಗಲಿಕ್ಕೆ ಒಗ್ಗಟ್ಟು ಕಾರಣವಾಗುತ್ತದೆ. ಎಲ್ಲಾ ಬುಡಕಟ್ಟು ಸಮಾಜದವರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಬರೀ ಶಾಲೆಗೆ ಕಳುಹಿಸುವುದಲ್ಲ ಉನ್ನತ ಶಿಕ್ಷಣದವರೆಗೆ ಓದಿಸುವುದಕ್ಕೆ ನಿಮ್ಮ ಪ್ರೋತ್ಸಾಹ ಸದಾ ಅವರೊಂದಿಗೆ ಇರಬೇಕು ಎಂದರು.

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್:

ವಿಧಾನ ಪರಿಷತ್ತು ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಾರ್ಮಿಕ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರಿಗೆ ಹಲವಾರು ರೀತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಕಾರ್ಮಿಕ ಇಲಾಖೆಯಲ್ಲಿ ಮೊದಲು 26 ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿಕೊಳ್ಳುತ್ತಿದ್ದರು. ಆದರೆ ಈಗ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಲ್ಲಾ ಅಸಂಘಟಿತ ಕಾರ್ಯ ಕಾರ್ಮಿಕರಿಗೆ 91 ವರ್ಗ ಗುರುತಿಸಿ ಅವರೆಲ್ಲರನ್ನೂ ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ಕೊಡುತ್ತಿದ್ದಾರೆ ಎಂದರು.

ರಿಜಿಸ್ಟರ್ ಮಾಡಿಸಿಕೊಂಡು ಸ್ಮಾರ್ಟ್ ಕಾರ್ಡ್ ಪಡೆದುಕೊಂಡರೆ ಕಾರ್ಮಿಕ ಇಲಾಖೆಯಿಂದ ಕೊಡುವ ಹಲವಾರು ಸೇವೆಗಳನ್ನು ನೀವು ಪಡೆದು ಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಶಾಶ್ವತವಾಗಿ ಅಂಗವಿಕಲತೆ, ಮರಣ ಉಂಟಾದರೆ ಪರಿಹಾರ ದೊರೆಯುತ್ತದೆ. ಆಶಾದೀಪ ಯೋಜನೆಯಲ್ಲಿ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಉದ್ಯೋಗ ತೆಗೆದುಕೊಂಡರೆ ಇಎಸ್ಐ ಮತ್ತು ಭವಿಷ್ಯ ನಿಧಿಯನ್ನು ಸರ್ಕಾರವೇ ಸುಮಾರು 3 ಸಾವಿರವರೆಗೆ ಬರೆಸಿಕೊಡುತ್ತದೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವೇತನದಲ್ಲಿ ಮಾಸಿಕ 6 ಸಾವಿರ ಸರ್ಕಾರವೇ ಬರಿಸಿಕೊಡುತ್ತದೆ ಎಂದು ಅವರು ತಿಳಿಸಿದರು.

ಕಾಯಕ ನಿಷ್ಠೆ ಪಾಲಿಸಿ:

ವಿಧಾನಪರಿಷತ್ತು ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಕಾಯಕ ನಿಷ್ಠೆ ಹಾಗೂ ದಾಸೋಹದ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸಿದವರು ಕಾಯಕಯೋಗಿ, ವಚನಕಾರ ನುಲಿಯ ಚಂದಯ್ಯ ಅವರ ಕಾಯಕ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರೆ ನೀಡಿದರು.

ನುಲಿಯ ಚಂದಯ್ಯನವರು ಬಸವಣ್ಣನವರ ಸಮಕಾಲೀನರು ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದರು. ಬಸವಣ್ಣನವರ ಕಾಲದಲ್ಲಿ ಮಂತ್ರಿ ಸೇವೆ ಸಲ್ಲಿಸಿದ್ದರು. ಅವರ ಇಡೀ ವಚನಗಳನ್ನು ಓದಿದಾಗ ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಆಹಾರವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ಧಾಂತ ಅವರದಾಗಿತ್ತು. ಕಾಯಕ ದಾಸೋಹಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ನುಲಿಯನ್ನು (ಹಗ್ಗ) ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಜೀವನ, ಸಮಾಜಸೇವೆ, ಕಾಯಕ ನಿಷ್ಠೆ ನಮಗೆ ಮಾದರಿ. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೇ ವೇಳೆ ವಕೀಲ ಕಿರಣ್ ಕುಮಾರ್ ಕೊತ್ತಗೆರೆ ಉಪನ್ಯಾಸ ನೀಡಿದರು. ಪಂಚಗವಿ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅನಿಲ್ ಚಿಕ್ಕಮಾದು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸಂಘದ ಅಧ್ಯಕ್ಷ ಡಿ.ಎನ್. ಮುತ್ತುರಾಜು, ಪದಾಧಿಕಾರಿಗಳಾದ ಪಿ. ನಾಗರಾಜ್, ಟಿ. ವೇದಾವತಿ, ಕೆ.ಎಚ್. ಸತ್ಯನಾರಾಯಣ , ಪುಟ್ಟಸ್ವಾಮಿ, ಶಿವಕುಮಾರ್ , ಮಹದೇವ, ಟಿ. ಪುರುಷೋತ್ತಮ, ಮಹದೇವ, ಸಿ. ರಾಜು, ನಾರಾಯಣಸ್ವಾಮಿ, ರಮೇಶ್, ಮೋಹನ, ರವಿಕುಮಾರ್, ಸತೀಶ, ಪ್ರಸನ್ನಕುಮಾರ ಮೊದಲಾದವರು ಇದ್ದರು.ಕರ್ನಾಟಕದ ಕುಳುವ, ಕೊರಮ, ಕೊರವ ಹಾಗೂ ಕೊರಚ ಸಮುದಾಯದವರು ನುಲಿಯ ಚಂದಯ್ಯ ಅವರನ್ನು ತಮ್ಮ ಜನಾಂಗದ ಮೂಲ ಪುರುಷ ಮತ್ತು ಆರಾಧ್ಯದೈವವೆಂದು ಆರಾಧಿಸುತ್ತಾರೆ. ಕಾಯಕ, ದಾಸೋಹ ಮತ್ತು ಸತ್ಯನಿಷ್ಠೆಯ ಮೂಲಕ ವಿಶ್ವ ಮಾನವ ಕೋಟಿಗೆ ಅರಿವಿನ ಬೆಳಕನ್ನು ನೀಡಿದ ಶರಣರ ಪೈಕಿ ನುಲಿಯ ಚಂದಯ್ಯ ಅವರು ಅಗ್ರಮಾನ್ಯರಾಗಿದ್ದಾರೆ.

- ಕಿರಣ್ ಕುಮಾರ್ ಕೊತ್ತಗೆರೆ, ವಕೀಲರು

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ