ಕನ್ನಡಪ್ರಭ ವಾರ್ತೆ ಮಡಿಕೇರಿ
ಚಿತ್ರಕಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಪಾಲ್ಗೊಂಡು ಮಾತನಾಡಿ ಭಾರತದಲ್ಲಿನ ಪಶ್ಚಿಮಘಟ್ಟ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಇದರಲ್ಲಿ ಅಪಾರ ಸಂಖ್ಯೆಯ ಸಸ್ಯ ಹಾಗೂ ಪ್ರಾಣಿ ಸಂಕುಲವಿದೆ. ಆದ್ದರಿಂದ ಈ ಅಮೂಲ್ಯ ಸಂಪತ್ತು ಹಾಗೂ ಜೀವ ವೈವಿಧ್ಯತೆಯ ತಾಣವಾಗಿರುವ ಈ ಪಶ್ಚಿಮಘಟ್ಟವನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕೆಂದು ಕರೆ ನೀಡಿದರು.
ಮಕ್ಕಳಲ್ಲಿ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಅಭಿಮಾನ ಮೂಡಿಸಬೇಕು. ಇದಕ್ಕೆ ಕನ್ನಡಪ್ರಭ ಆಯೋಜಿಸುತ್ತಿರುವ ಚಿತ್ರಕಲಾ ಸ್ಪರ್ಧೆ ಕೂಡ ಪೂರಕವಾಗಿದೆ ಎಂದು ಶ್ಲಾಘಿಸಿದರು.ರೋಟರಿ ಮಡಿಕೇರಿ ವುಡ್ಸ್ ನ ಅಧ್ಯಕ್ಷ ಕಿರಣ್ ಕುಂದರ್ ಮಾತನಾಡಿ ಅರಣ್ಯ ಸಂಪತ್ತು ಉಳಿಸಿದರೆ ಮಾತ್ರ ಮನುಷ್ಯರು ಉಳಿಯಲು ಸಾಧ್ಯ. ಕಾಡಿನಲ್ಲಿ ಹುಲಿ ಸಂಖ್ಯೆ ಹೆಚ್ಚಾಗಬೇಕಾದರೆ ಜಿಂಕೆಗಳ ಸಂಖ್ಯೆಯೂ ಹೆಚ್ಚಾಗಬೇಕಿದೆ. ಅದರಂತೆ ಎಲ್ಲಾ ಪ್ರಾಣಿಗಳ ಸಂಖ್ಯೆಯೂ ಅಧಿಕವಾಗುವುದರೊಂದಿಗೆ ಅರಣ್ಯದ ಉಳಿವಿಗೆ ನಾವೆಲ್ಲರೂ ಕೈಜೋಡಿಸಬೇಕೆಂದರು.
ಕನ್ನಡಪ್ರಭ ಮೈಸೂರು ಜಾಹೀರಾತು ವ್ಯವಸ್ಥಾಪಕರಾದ ಕೃಷ್ಣ ಪ್ರಸಾದ್ ಮಾತನಾಡಿ ಪ್ರಾಣಿ ಹಾಗೂ ಅರಣ್ಯದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಕನ್ನಡಪ್ರಭ ಪತ್ರಿಕೆ ರಾಜ್ಯದ ಎಲ್ಲಾ ಕಡೆಗಳಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ ಎಂದು ತಿಳಿಸಿದರು.
ಚಿತ್ರಕಲಾ ಶಿಕ್ಷಕರಾದ ರಾಮ್ ಗೌತಮ್ ಮಾತನಾಡಿ ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿದೆ. ಮತ್ತಷ್ಟು ಕಲಾತ್ಮತೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ನೀಡಿರುವ ವಿಷಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರವನ್ನು ರಚಿಸಬೇಕೆಂದು ಸಲಹೆ ನೀಡಿದರು.
ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎನ್ನುವ ಹಾಗೆ ಚಿತ್ರಕಲೆಯ ಸವಿಯು ಸವಿದವನಿಗೆ ಗೊತ್ತು. ಮಕ್ಕಳಿಗೆ ಒಳ್ಳೆಯ ವೇದಿಕೆ ಸಿಕ್ಕಂತಾಯಿತು. ಶಾಲಾ ಪಠ್ಯದ ಜೊತೆಗೆ ಆಗಾಗ ಇಂತಹ ಸ್ಪರ್ಧೆ ನಡೆದರೆ ಮಕ್ಕಳ ಸೃಜನ ಶೀಲತೆ ಇನ್ನಷ್ಟು ಹೆಚ್ಚಾಗುತ್ತದೆ. ಕೊಡಗಿನ ಮಕ್ಕಳಿಗೆ ಕನ್ನಡಪ್ರಭ ವತಿಯಿಂದ ಇಂಥದೊಂದು ಅವಕಾಶ ಕಲ್ಪಿಸಿದ್ದು, ಅರ್ಥಪೂರ್ಣ ಸುದ್ದಿಗಳ ಜೊತೆಗೆ ಮಕ್ಕಳ ವಿಕಾಸನಕ್ಕೂ ಪತ್ರಿಕೆ ಕೆಲಸ ಮಾಡುತ್ತಿದೆ.
-------------------------------------------------------------
ಕನ್ನಡಪ್ರಭ ಆಯೋಜಿಸಿದ ಕೊಡಗು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯ 4ರಿಂದ 5ನೇ ತರಗತಿ ವರೆಗೆ ನಡೆದ ಸ್ಪರ್ಧೆಯಲ್ಲಿ ಮದೆನಾಡು ಬಿ.ಜಿ.ಎಸ್. ಪಬ್ಲಿಕ್ ಶಾಲೆಯ ಗಾನವಿ.ಬಿ.ಸಿ(ಪ್ರ), ಮಡಿಕೇರಿಯ ಸಂತ ಮೈಕಲರ ಶಾಲೆಯ ಹರ್ಷಿಣಿ ಎಂ.ಕೆ.(ದ್ವಿ), ಸಂತ ಮೈಕಲರ ಶಾಲೆಯ ಕನ್ನಡ ಮಾಧ್ಯಮದ ಆರಾಧನ ಎಸ್.ಬಿ.(ತೃ), ಶನಿವಾರಸಂತೆ ಸುಪ್ರಜಾ ಗುರುಕುಲ ಶಾಲೆಯ ಬಿ.ಡಿ. ಧನ್ಯ ಹಾಗೂ ಶ್ರೀ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆಯ ಕನ್ನಿಕಾ ಸಮಾಧಾನಕರ ಬಹುಮಾನ ಗಳಿಸಿದರು.
8ರಿಂದ 10ನೇ ತರಗತಿ ವರೆಗೆ ನಡೆದ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಹನಿಯಾ(ಪ್ರ), ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ತೇಜಸ್ ಟಿ.ಕೆ.(ದ್ವಿ), ಕಾವೇರಿ ಶಾಲೆಯ ಅರ್ನವ್ (ತೃ), ಮಡಿಕೇರಿ ಸಂತ ಜೋಸೆಫರ ಶಾಲೆಯ ಕೃಪಾ ಎ.ಎಲ್. ಹಾಗೂ ಕಡಗದಾಳು ಸರ್ಕಾರಿ ಪ್ರೌಢಶಾಲೆಯ ಹರ್ಷಿತಾ ಬಿ.ಎಸ್. ಸಮಾಧಾನಕರ ಬಹುಮಾನ ಪಡೆದರು.