ನಗರದ ಹೊರವಲಯದ ಗವನಹಳ್ಳಿಯಲ್ಲಿ ಬುದ್ಧ ಅಧ್ಯಯನ ದಮ್ಮ ಕೇಂದ್ರ ಸ್ಥಾಪನೆಗೆ ಶಂಕುಸ್ಥಾಪನೆ
ಕನ್ನಡಪ್ರಭವಾರ್ತೆ, ಚಿಕ್ಕಮಗಳೂರುಬುದ್ಧ ಮಾನವೀಯತೆ ಮತ್ತು ಜ್ಞಾನದ ಬೆಳಕನ್ನು ಸಾರಿದ್ದಾರೆ. ಹೀಗಾಗಿ ಬುದ್ದನ ದಾರಿಯಲ್ಲಿ ಪ್ರತಿಯೊಬ್ಬರೂ ನಡೆಯಬೇಕು ಎಂದು ಬಾಬಾಸಾಹೇಬ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ನಗರದ ಹೊರವಲಯದ ಗವನಹಳ್ಳಿಯಲ್ಲಿ ಬುದ್ಧ ಅಧ್ಯಯನ ದಮ್ಮ ಕೇಂದ್ರ ಸ್ಥಾಪನೆಗೆ ಭಾನುವಾರ ಶಂಕುಸ್ಥಾಪನೆ ಹಾಗೂ ಬುದ್ಧನ ವಿಗ್ರಹ ಅನಾರಣಗೊಳಿಸಿ ಮಾತನಾಡಿದರು. ಬಾಬಾಸಾಹೇಬ್ ಅಂಬೇಡ್ಕರ್ ಕೂಡ ಪ್ರತಿಯೊಬ್ಬರು ಬುದ್ದನ ಹಾದಿಯಲ್ಲಿ ನಡೆಯಬೇಕು ಎಂದಿದ್ದಾರೆ. ಆ ನಿಟ್ಟಿನಲ್ಲಿ ಈ ದೇಶ ಬುದ್ಧನ ನಾಡಾಗಬೇಕು. ಸಾಮಾಜಿಕ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಈ ದಿನ ಇಲ್ಲಿ ಬುದ್ದನ ಪ್ರತಿಮೆಯನ್ನು ಸಾಂಕೇತಿಕವಾಗಿ ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.ಪ್ರಪಂಚದಾದ್ಯಂತ ತಡವಾಗಿಯಾದರೂ ಬುದ್ದನ ಅನುಯಾಯಿಗಳು ಹೆಚ್ಚಾಗಿ ಬೌದ್ಧ ಧರ್ಮಸ್ವೀಕರಿಸುವ ಕೆಲಸ ನಡೆಸುತ್ತಿದ್ದಾರೆ. ಇತ್ತೀಚೆಗೆ ನಗರದ ಕುವೆಂಪು ಕಲಾಮಂದಿರದಲ್ಲಿಯೂ ಕೂಡ ಬುದ್ಧ ದಮ್ಮ ದೀಕ್ಷಾ ಕಾರ್ಯಕ್ರಮ ನಡೆದಿತ್ತು. ಬೌದ್ಧ ದಮ್ಮದ ಕಾರ್ಯಚಟುವಟಿಕೆಗಳನ್ನು ನಡೆಸಲು ನಮಗೆ ಬುದ್ಧ ಅಧ್ಯಯನ ಕೇಂದ್ರದ ಸ್ಥಾಪನೆ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಗವನಹಳ್ಳಿ ಸರ್ವೆ ನಂಬರ್ 93 ರಲ್ಲಿ 10 ಎಕರೆ ಜಾಗ ಕೇಳಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಕಂದಾಯ ಕಾರ್ಯದರ್ಶಿ, ಡಿಸಿ, ಎಸಿ ಗಮನಕ್ಕೆ ತಂದಿದ್ದೇವೆ. ನಮ್ಮ ಮನವಿಗೆ ಮನ್ನಣೆ ನೀಡಿ ಜಮೀನು ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.
ವಕೀಲ ಅನಿಲ್‌ಕುಮಾರ್ ಮಾತನಾಡಿ, ಬುದ್ದ ಅಧ್ಯಯನ ಮತ್ತು ದಮ್ಮ ಕೇಂದ್ರವನ್ನು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಇಂದು ಸಾಂಕೇತಿಕವಾಗಿ ಬುದ್ದನ ಪ್ರತಿಮೆ ಪ್ರತಿಷ್ಠಾಪಿಸಿದ್ದೇವೆ ಎಂದರು.ಡಿಎಸ್‌ಎಸ್ ಮುಖಂಡ ಮರ್ಲೆ ಅಣ್ಣಯ್ಯ ಮಾತನಾಡಿ, ಸ್ಥಳೀಯ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ದಲಿತರ ಬಗ್ಗೆ ಅಸಮಾಧಾನ ಇದ್ದಂತಿದೆ. ಅದನ್ನು ಬದಿಗಿಟ್ಟು ಇದೀಗ ನಾವೇ ಹುಡುಕಿ ಕೊಟ್ಟಿರುವ ಸರ್ಕಾರಿ ಜಮೀನನ್ನು ಬುದ್ದ ಧಮ್ಮ ಕೇಂದ್ರ ಸ್ಥಾಪನೆಗೆ ಮಂಜೂರು ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.
ಡಿಎಸ್‌ಎಸ್ ಮುಖಂಡ ದಂಟರಮಕ್ಕಿ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿವರೆಗೆ ಆಳಿದ ಯಾವೊಬ್ಬ ಜನಪ್ರತಿನಿಧಿ ಗಳು ಬುದ್ದ, ಬಸವ, ಅಂಬೇಡ್ಕರ್ ವನ, ಧಮ್ಮ ಕೇಂದ್ರ ಸ್ಥಾಪಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಇನ್ನಾದರೂ ಜಾಗ ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಬುದ್ದ ವಿಗ್ರಹ ಪ್ರತಿಷ್ಠಾಪನೆ ಬಳಿಕ ಸಾಮೂಹಿಕ ಪ್ರಾರ್ಥನೆ ನಡೆಯಿತು. ವಿವಿಧ ಪ್ರಗತಿಪರ ಸಂಘಟನೆ ಮುಖಂಡರಾದ ಹುಣಸೇಮಕ್ಕಿ ಲಕ್ಷ್ಮಣ, ಕೂದುವಳ್ಳಿ ಮಂಜು, ಹೊನ್ನೇಶ್, ವಸಂತಕುಮಾರ್, ಅನಂತ್ ಮಾತನಾಡಿದರು. ಎಂ.ಜಿ. ಲೋಕೇಶ್, ಪೂರ್ಣೇಶ್, ನಾಗೇಶ್, ಮರಿಯಪ್ಪ, ಸುರೇಶ್, ಬಸವರಾಜು ಉಪಸ್ಥಿತರಿದ್ದರು.
31 ಕೆಸಿಕೆಎಂ 4ಚಿಕ್ಕಮಗಳೂರಿನ ಗವನಹಳ್ಳಿ ಸರ್ವೆ ನಂಬರ್ 93 ರಲ್ಲಿ ಭಾನುವಾರ ಬುದ್ದ ದಮ್ಮ ಕೇಂದ್ರ ಸ್ಥಾಪನೆಗೆ ಬುದ್ದ ಪ್ರತಿಮೆ ಪ್ರತಿಷ್ಠಾಪನೆ ಕಾರ್ಯ ನೆರವೇರಿತು.