ಪ್ರತಿಯೊಬ್ಬರೂ ತಮ್ಮ ಅಂತರಂಗದ ಧ್ವನಿ ಅನುಸರಿಸಿ ನಡೆಯಬೇಕು

KannadaprabhaNewsNetwork |  
Published : Mar 16, 2026, 12:30 AM IST
15ಎಚ್ಎಸ್ಎನ್4 :  | Kannada Prabha

ಸಾರಾಂಶ

ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿಹಬ್ಬ ಮಹೋತ್ಸವವನ್ನು ಶನಿವಾರ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಂದೆತಾಯಿ, ಮಕ್ಕಳು, ಸಹೋದರರು ಪರಸ್ಪರ ಕಷ್ಟಸುಖಗಳನ್ನು ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಕುಟುಂಬದಲ್ಲಿ ಸೌಹಾರ್ದತೆ ಉಳಿಯುತ್ತದೆ ಎಂದು ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬೆಳ್ಳಿಹಬ್ಬ ಮಹೋತ್ಸವವನ್ನು ಶನಿವಾರ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಮನುಷ್ಯರ ನಡುವಿನ ಸಂಬಂಧಗಳನ್ನು ಆಸ್ತಿ ಅಥವಾ ಶ್ರೀಮಂತಿಕೆಯ ಆಧಾರದ ಮೇಲೆ ಅಳೆಯಬಾರದು. ಬದಲಾಗಿ ಪ್ರೀತಿ, ವಿಶ್ವಾಸ ಹಾಗೂ ಆತ್ಮೀಯತೆಯ ಮೇಲೆ ನಿಂತ ಸಂಬಂಧಗಳು ಜೀವನದಲ್ಲಿ ಶಾಶ್ವತವಾಗಿರುತ್ತವೆ ಎಂದು ಹೇಳಿದರು.

ಕುಟುಂಬಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಕಲಹಗಳು ಉಂಟಾಗಿ ಕಾನೂನು ಪ್ರಕರಣಗಳವರೆಗೆ ಹೋಗುತ್ತಿರುವುದು ದುರದೃಷ್ಟಕರ ಸಂಗತಿ. ತಂದೆತಾಯಿ, ಮಕ್ಕಳು, ಸಹೋದರರು ಪರಸ್ಪರ ಕಷ್ಟಸುಖಗಳನ್ನು ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಂಡರೆ ಕುಟುಂಬದಲ್ಲಿ ಸೌಹಾರ್ದತೆ ಉಳಿಯುತ್ತದೆ ಎಂದು ಅವರು ತಿಳಿಸಿದರು.

ಪ್ರತಿಯೊಬ್ಬರೂ ತಮ್ಮ ಅಂತರಂಗದ ಧ್ವನಿಯನ್ನು ಅನುಸರಿಸಿ ಧರ್ಮ ಮಾರ್ಗದಲ್ಲಿ ನಡೆದುಕೊಂಡರೆ ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ. ಮನುಷ್ಯನು ಹಣದ ಮೇಲಿನ ಅತಿಯಾದ ವ್ಯಾಮೋಹವನ್ನು ಕಡಿಮೆ ಮಾಡಿಕೊಂಡು ಗಳಿಸಿದ ಸಂಪತ್ತನ್ನು ಧರ್ಮ ಕಾರ್ಯಗಳಿಗೆ ಹಾಗೂ ಸಮಾಜ ಸೇವೆಗೆ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಸಹಕಾರ ಸಂಘಗಳು ಜನರ ಆರ್ಥಿಕ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸುತ್ತಿವೆ ಎಂದು ಹೇಳಿದರು. ನಬಾರ್ಡ್ ಸಂಸ್ಥೆಯಿಂದ ಸಹಕಾರ ಬ್ಯಾಂಕ್‌ಗಳಿಗೆ ಹೆಚ್ಚಿನ ಆರ್ಥಿಕ ನೆರವು ದೊರಕಿದರೆ ಈ ಕ್ಷೇತ್ರ ಮತ್ತಷ್ಟು ಬಲಪಡಲಿದೆ ಎಂದು ತಿಳಿಸಿದರು.ಶಿವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಿ.ವಿ. ಬಸವರಾಜು ಮಾತನಾಡಿ, ನಿರ್ದೇಶಕರ ಸಹಕಾರ ಹಾಗೂ ಸದಸ್ಯರ ಬೆಂಬಲದಿಂದ ಸಂಸ್ಥೆ ಯಶಸ್ವಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಧು ವೀರಶೈವ ಸಮಾಜದ ತಾಲೂಕು ಘಟಕದ ಅಧ್ಯಕ್ಷ ರೇವಣ್ಣ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಶೇಖರಪ್ಪ, ಸೊಸೈಟಿಯ ಉಪಾಧ್ಯಕ್ಷ ಹಾಲಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಶಶಿಧರ್, ನಿರ್ದೇಶಕರಾದ ಚಂದ್ರಶೇಖರ್‌, ಬಸವರಾಜು, ಪ್ರಸನ್ನಕುಮಾರ್, ಸಂಗಮೇಶ್, ರವೀಶ್, ಪ್ರವೀಣ್, ಎಂ.ಬಿ. ಸಂಗಮೇಶ್, ಚಂದ್ರಪ್ಪ, ರಮೇಶ್, ಉಮೇಶ್, ಮೋಹನ್‌ ಕುಮಾರ್, ಸುಧಾ, ವಿಜಯ ಹಾಗೂ ಸಿಬ್ಬಂದಿ ಶಿವಕುಮಾರ್, ರಂಗಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಪುಸ್ತಕ ಹಿಡಿಯಿರಿ: ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ಮಾನಸ
ಬಿಜೆಪಿ-ಜೆಡಿಎಸ್ ನಿಂದ ಪಾಠ ಕಲಿಯಬೇಕಿಲ್ಲ: ಶಾಸಕ ಕೆ. ಎಸ್. ಆನಂದ್