ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ
ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ ಕರೆ ನೀಡಿದರು.
ದಿಂಡಿನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನರಸಿಂಹರಾಜಪುರ ಗ್ರಾಮೀಣ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ ಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ಶ್ರದ್ಧೆ, ಏಕಾಗ್ರತೆಯಿಂದ ಶಿಕ್ಷಣ ಪಡೆಯಲು ಪೋಷಕರು ಹಾಗೂ ಶಿಕ್ಷಕರ ಸಹಕಾರ ಅಗತ್ಯವಾಗಿದೆ. ಸರ್ಕಾರ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾಗಿ ಪ್ರತಿಭಾ ಕಾರಂಜಿ, ಕ್ರೀಡಾ ಕೂಟ ನಡೆಸುತ್ತಿದೆ. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ, ಕುಟುಂಬದ ಹಾಗೂ ದೇಶದ ಆಸ್ತಿಯಾಗಬೇಕು ಎಂದು ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪಾ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಮುಖ್ಯ ಉದ್ದೇಶ. ಮಕ್ಕಳು ಶಿಕ್ಷಣದ ಜೊತೆಗೆ ವಿನಯವಂತರಾಗಿ, ಗುರು ಹಿರಿಯರಿಗೆ ಗೌರವ ಕೊಡುವ ಸತ್ಪ್ರಜೆಯಾಗಬೇಕು. ಈ ವರ್ಷದ ವಲಯಮಟ್ಟದ ಪ್ರತಿಭಾ ಕಾರಂಜಿ ಬಾಳೆಹೊನ್ನೂರಿನಿಂದ ಪ್ರಾರಂಭವಾಗಿದೆ. 9 ಕ್ಲಸ್ಟರ್ ಹಂತದಲ್ಲಿ ನಡೆದು ನಂತರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ನಡೆಯಲಿದೆ. ಪ್ರತಿಭಾ ಕಾರಂಜಿಗೆ ಸರ್ಕಾರ ನೀಡುವ ಅನುದಾನ ಕಡಿಮೆ ಇದ್ದರೂ ಗ್ರಾಮಸ್ಥರು ಹಬ್ಬದ ರೀತಿಯಲ್ಲಿ ಅದ್ದೂರಿಯಾಗಿ ಪ್ರತಿಭಾ ಕಾರಂಜಿ ನಡೆಸುತ್ತಾರೆ.ದಿಂಡಿನಕೊಪ್ಪ ಶಾಲೆಯಲ್ಲಿ 32 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕಿ ರೂಪ, ದಾನಿಗಳಾದ ಪುರುಷೋತ್ತಮ್ ಭಟ್, ವಿಲ್ಸನ್, ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.ನಂತರ 10 ಶಾಲೆಗಳಿಂದ ಬಂದ ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.