ಚಿತ್ರದುರ್ಗ: ನಾಟಕ ಮಾಧ್ಯಮ ಮನರಂಜನೆಗಷ್ಟೇ ಸೀಮಿತವಲ್ಲದೇ ಪ್ರಭುತ್ವವನ್ನೇ ಬದಲಾಯಿಸುವ ಶಕ್ತಿಯಿದೆ. ನೂರು ಭಾಷಣಗಳು ಬೀರದ ಪ್ರಭಾವ ರಂಗದ ಮೇಲಿನ ಒಂದು ದೃಶ್ಯ ಮನಸ್ಸನ್ನೇ ಬದಲಾಯಿಸಬಲ್ಲದು ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು. ಚಿತ್ರದುರ್ಗ ನಗರದ ಸರಕಾರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಗೌತಮ ಬುದ್ಧ ಪ್ರತಿಷ್ಟಾನ ಹಾಗೂ ಸರ್ಕಾರಿ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ನಾಟಕ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೂಪಾಂತರ ಗೊಂಡ ರಂಗಕಲೆ ಬೀದಿ ನಾಟಕಗಳ ಮೂಲಕ ಆಳುವ ವರ್ಗದ ದೌರ್ಜನ್ಯ, ಸಾಮಾಜಿಕ ಅಂಕುಡೊಂಕುಗಳನ್ನು ಕಿತ್ತು ಹೊಗೆಯಲು ತನ್ನದೇ ಆದ ಪಾತ್ರ ವಹಿಸಿದೆ. ನಾಟಕ ಕಲೆ ತುಂಬಾ ಪ್ರಾಚೀನವಾದದ್ದು. ಅದು ಮಾನವನ ಬದುಕಿನ ಅವಿಭಾಜ್ಯ ಅಂಗ. ನಾಟಕ ನಮ್ಮ ವ್ಯಕ್ತಿತ್ವವನ್ನು ಬದಲಾಯಿಸುವ ಸಶಕ್ತ ಕಲಾ ಮಾಧ್ಯಮ ಎಂದರು.
ಕಥೆಗಾರ ಮೋದೂರು ತೇಜ ಮಾತನಾಡಿ, "ಯುದ್ಧ ಎಂದಿಗೂ ಮಾಯದ ಗಾಯ " ಎಂಬ ಕಿರಂ ಅವರ ಮಾತು ನನ್ನನ್ನು ಬಹುವಾಗಿ ಕಾಡಿತು. ಆ ಕಾರಣಕ್ಕೆ ಅಶೋಕ ಕಳಿಂಗ ಯುದ್ಧವನ್ನು ದಯಾನದಿ ದಂಡೆಯ ಮೇಲೆ ನಡೆಸಿದ. ಆ ವಿಪರ್ಯಾಸವನ್ನೆ ವಸ್ತುವನ್ನಾಗಿಸಿ ನಾಟಕ ರಚಿಸಿದೆ. ಅದು ಈಗ ರಂಗ ಪ್ರಯೋಗಕ್ಕೆ ಸಿದ್ಧವಾಗುತ್ತಿರುವುದು ಸಂತೋಷದ ವಿಚಾರ. ಅಶೋಕನ ಮೂಲಕ ಬುದ್ಧನ ಕರುಣಾ ಮೈತ್ರಿಯ ವಿಚಾರಗಳು ಎಲ್ಲೆಡೆ ಹರಡಲಿ ಎಂದು ಹೇಳಿದರು.
ಶಿಬಿರದ ನಿರ್ದೇಶಕರಾದ ಧೀಮಂತ ರಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಎಸ್ಎಸ್ ಘಟಕ ಕಾರ್ಯಕ್ರಮ ಅಧಿಕಾರಿಗಳಾದ ಡಾ.ವಿ.ಪ್ರಸಾದ್, ಬಿ.ಕೆ.ಬಸವರಾಜ್, ಲೇಖಕರಾದ ಡಾ.ಗಂಗಾಧರ್, ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಅಧಿಕಾರಿಗಳಾದ ಗಂಗಾಧರ್, ಲೀಲಾವತಿ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳಾದ ತಿಪ್ಪೇಸ್ವಾಮಿ, ರವಿಕುಮಾರ್ ಇದ್ದರು.