ಕೆಜಿಎಫ್: ನಗರಸಭೆಗೆ ಬಾಡಿಗೆ ಪಾವತಿಸದಿರುವ 20ಕ್ಕೂ ಅಧಿಕ ಮಳಿಗೆಗಳಿಗೆ ನಗರಸಭೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ನಗರಸಭೆ ವ್ಯಾಪ್ತಿ ಎಂ.ಜಿ. ಮಾರುಕಟ್ಟೆಯಲ್ಲಿರುವ ಮಳಿಗೆಗಳಿಂದ ₹4 ಕೋಟಿಗೂ ಅಧಿಕ ಬಾಡಿಗೆ ಹಣವನ್ನು ನಗರಸಬೆಗೆ ಪಾವತಿಸದ ಹಿನ್ನೆಲೆ ಪೌರಾಯುಕ್ತ ಶ್ರೀಧರ್ ಹಾಗೂ ಸಿಬ್ಬಂದಿ ಬೀಗ ಜಡಿದು ಬಾಡಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಸಚಿವರ ಆದೇಶ:

ನ್ಯಾಯಾಲಯವು ಬಾಕಿ ಬಾಡಿಗೆ ಹಣ ವಸೂಲಿ ಮಾಡಬೇಕು ಎಂಬ ಆದೇಶ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ನಗರಸಭೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ಬಾಕಿ ಹಣ ವಸೂಲಿ ಮಾಡಲೇಬೇಕು ಎಂದು ಆದೇಶ ನೀಡಿದ್ದರಿಂದ ಪೌರಾಯುಕ್ತ ಶ್ರೀಧರ್ ಅವರ ಸೂಚನೆ ಮೇರೆಗೆ ನಗರಸಭೆ ವ್ಯವಸ್ಥಾಪಕ ಜಯರಾಮ್ ಅವರ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳು, ಸಿಬ್ಬಂದಿ ಎಂ.ಜಿ. ಮಾರುಕಟ್ಟೆಯಲ್ಲಿರುವ ಅಂಗಡಿಗಳ ಪೈಕಿ ಅತಿ ಹೆಚ್ಚು ಬಾಡಿಗೆ ಹಣ ಬಾಕಿ ಉಳಿಸಿಕೊಂಡಿರುವ 20ಕ್ಕೂ ಹೆಚ್ಚು ಅಂಗಡಿಗಳಿಗೆ ಸೀಲ್ ಹಾಕಿದರು.

ಈ ವೇಳೆ ಮಾತನಾಡಿದ ನಗರಸಭೆ ವ್ಯವಸ್ಥಾಪಕ ಜಯರಾಮ್, ಪೌರಾಯುಕ್ತರು ಬಾಡಿಗೆ ಹಣವನ್ನು ವಸೂಲಿ ಮಾಡಬೇಕು ಅಥವಾ ಬಾಡಿಗೆ ಪಾವತಿ ಮಾಡಿದವರ ಅಂಗಡಿಗಳಿಗೆ ಸೀಲ್ ಹಾಕಬೇಕು ಎಂದು ನಿರ್ದೇಶನ ನೀಡಿದ್ದರ ಮೇರೆಗೆ ಮಾರುಕಟ್ಟೆಗೆ ಭೇಟಿ ನೀಡಿ ಬಾಡಿಗೆ ಉಳಿಸಿಕೊಂಡಿರುವ 20ಕ್ಕೂ ಹೆಚ್ಚು ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಇನ್ನು ಮುಂದೆ ಸಹ ಬಾಕಿ ಉಳಿಸಿಕೊಂಡಿರುವ ಅಂಗಡಿಗಳಿಗೆ ಬೀಗ ಜಡಿಯಲಾಗುವುದು ಎಂದು ಹೇಳಿದರು.