ಕನಕಗಿರಿ ಕ್ಷೇತ್ರದ ಜನ ಬುದ್ಧಿವಂತರಿದ್ದು, ಯಾವಾಗ, ಯಾರಿಗೆ ಸೋಲಿಸಬೇಕು, ಗೆಲ್ಲಿಸಬೇಕೆನ್ನುವುದು ಗೊತ್ತಿದೆ.

ಕನಕಗಿರಿ: ನಾನು ಸಂಸ್ಕಾರವಂತ ಕುಟುಂಬದಿಂದ ಬಂದಿದ್ದು, ಬಿಜೆಪಿಯವರಂತೆ ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸುವ ಕೆಲಸ ಮಾಡಿಲ್ಲ ಎಂದು ಮಾಜಿ ಶಾಸಕ ಬಸವರಾಜ ದಡೇಸ್ಗೂರು ವಿರುದ್ಧ ಜಿಲ್ಲಾ ಉಸ್ತುವಾರಿ ಶಿವರಾಜ ತಂಗಡಗಿ ಹರಿಹಾಯ್ದರು.

ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ನಾಗಲಾಪುರ-ಬಸರಿಹಾಳ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕನಕಗಿರಿ ಕ್ಷೇತ್ರದ ಜನ ಬುದ್ಧಿವಂತರಿದ್ದು, ಯಾವಾಗ, ಯಾರಿಗೆ ಸೋಲಿಸಬೇಕು, ಗೆಲ್ಲಿಸಬೇಕೆನ್ನುವುದು ಗೊತ್ತಿದೆ. 20 ವರುಷದ ರಾಜಕಾರಣದಲ್ಲಿ ತಂಗಡಗಿ ನಡೆ, ನುಡಿ ಬಗ್ಗೆ ಜನರಿಗೆ ತಿಳಿದಿದೆ. ಮಾಜಿ ಶಾಸಕ ಜನರಿಗೆ ಅವಾಚ್ಯವಾಗಿ ಬೈದಿರುವ ವಿಡಿಯೋ ನನ್ನ ಬಳಿ ಇದೆ. ಅಂಥವರಿಂದ ನಾನು ಸಂಸ್ಕಾರದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಕಿಡಿಕಾರಿದರು.

ಕ್ಷೇತ್ರದಲ್ಲಿ ಎಲ್ಲೇ ಹೋಗಲಿ ಜನತೆ ರಸ್ತೆ ರಸ್ತೆ ಎಂದು ಕೇಳುತ್ತಿದ್ದಾರೆ. ಈ ಹಿಂದಿನ ಶಾಸಕ ರಸ್ತೆ ಅಭಿವೃದ್ಧಿ ಮಾಡದಿರುವುದೇ ಇದಕ್ಕೆಲ್ಲ ಕಾರಣ. ರಸ್ತೆ ನಿರ್ಮಾಣಕ್ಕೆ ಅತಿ ಹೆಚ್ಚಿನ ಅನುದಾನ ತರಲಾಗುತ್ತಿದೆ. ಬೆರಳೆಣಿಕೆಯಷ್ಟು ಗ್ರಾಮಗಳಿಗೆ ತಗಲುವ ಕನಕಗಿರಿಯಿಂದ ಯತ್ನಟ್ಟಿ ರಸ್ತೆ ನಿರ್ಮಾಣಕ್ಕೆ ₹೩೮ ಕೋಟಿ ವ್ಯಯ ಮಾಡಿ ರಸ್ತೆ ನಿರ್ಮಿಸಲಾಗುತ್ತಿದೆ. ಅಲ್ಲದೇ ೬.೩ ಕಿಮೀ ಬಸರಿಹಾಳ ನಾಗಲಾಪುರ ರಸ್ತೆ ಸುಧಾರಣೆ ಮಾಡಲಾಗುತ್ತಿದ್ದು, ₹ ೭.೫ ಕೋಟಿ ವೆಚ್ಚದಲ್ಲಿ ಕನಕಗಿರಿಯಿಂದ ಚಿಕ್ಕತಾಂಡಾ ೫.೮ ಕಿಮೀ ರಸ್ತೆ ಸುಧಾರಣೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ₹೩೫ ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಾಗುವುದು. ಕನಕಗಿರಿಯಿಂದ ದೇವಲಾಪುರ ರಸ್ತೆಗೆ ₹೨೦ ಕೋಟಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಗ್ರಾಮಸ್ಥರಿಂದ ಮನವಿ: ಬಸರಿಹಾಳ ಗ್ರಾಮದಲ್ಲಿ ವಸತಿ ಶಾಲೆ ಆರಂಭಿಸಬೇಕು ಹಾಗೂ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಬೇಕು. ಶಾಲೆಗೆ ಶಿಕ್ಷಕರ ಕೊರತೆಯಿದ್ದು, ಶಿಕ್ಷಕರನ್ನು ಒದಗಿಸಬೇಕು. ₹೨ ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಿಸಬೇಕು ಎಂದು ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದರು.

ಗ್ರಾಮಸ್ಥರ ಮನವಿಗೆ ಉತ್ತರಿಸಿದ ಸಚಿವರು, ₹೨ ಕೋಟಿ ವೆಚ್ಚದಲ್ಲಿ ಕನಕಗಿರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದೆ. ವಸತಿ ಶಾಲೆ ಆರಂಭಕ್ಕೆ ಕೆಲ ಷರತ್ತುಗಳಿವೆ ಎಂದ ಅವರು, ಪ್ರೌಢಶಾಲೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ಭಾಗದ ಶಿಕ್ಷಕರೇ ನೇಮಕವಾಗುವುದರಿಂದ ಶೀಘ್ರವೇ ಶಿಕ್ಷಕರನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಡಿಸಿಸಿ ಉಪಾಧ್ಯಕ್ಷ ಸಿದ್ದಪ್ಪ ನಿರ್ಲೂಟಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ್, ಶರಣೇಗೌಡ, ಅನಿಲ್‌ಕುಮಾರ ಬಿಜ್ಜಳ, ರಾಜಾಸಾಬ್ ನಂದಾಪುರ, ನಾಗಪ್ಪ ಹುಗ್ಗಿ ಇತರರಿದ್ದರು.