ಕನ್ನಡಪ್ರಭ ವಾರ್ತೆ ಹೊನ್ನಾಳಿ
ಅನಾದಿ ಕಾಲದಿಂದಲೂ ಪ್ರಕೃತಿ ವಿಕೋಪಗಳು ಸಂಭವಿಸುತ್ತಿವೆ. ಚಂಡಮಾರುತ, ಸುನಾಮಿ, ಅತಿವೃಷ್ಠಿಯಿಂದ ನದಿ ಪ್ರವಾಹಗಳು, ದೊಡ್ಡ ಪ್ರಮಾಣದ ರೈಲ್ವೆ ಇತರೆ ಅಫಘಾತಗಳು, ದೊಡ್ಡ ಕಟ್ಟಡಗಳಲ್ಲಿ ಅಗ್ನಿ ದುರಂತ ಮುಂತಾದ ವಿಪತ್ತುಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪಗಳ ಎದುರಿಸುವ ಮನೋಭಾವ, ಧೈರ್ಯ ಎಲ್ಲರಲ್ಲಿರಲಿ ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ್ ರಾವ್ ಹೇಳಿದರು.ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠ ಸಮೀಪದ ತುಂಗಾಭದ್ರಾ ನದಿ ದಂಡೆ ಮೇಲೆ ಜಿಲ್ಲಾಡಳಿತ, ತಾಲೂಕು ಆಡಳಿತ, ಪೊಲೀಸ್, ಅಗ್ನಿಶಾಮಕ ದಳ, ಕಂದಾಯ ಇಲಾಖೆ, ದೂರಸಂಪರ್ಕ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ರಾಷ್ಟ್ರ ಮತ್ತು ರಾಜ್ಯ ವಿಪತ್ತು ಸ್ಪಂದನ ಮತ್ತು ನಿರ್ವಹಣೆ ಪಡೆಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ವಿಕೋಪಗಳಂತಹ ವಿಪತ್ತುಗಳ ಸಂದರ್ಭ ಸ್ವಯಂ ರಕ್ಷಣೆ ಮತ್ತು ಇತರರನ್ನು ರಕ್ಷಿಸುವ ಕುರಿತು ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿ ವಿಕೋಪಗಳ ಸಂದರ್ಭ ಪ್ರತಿಯೊಬ್ಬರೂ ಸ್ವಯಂ ರಕ್ಷಣೆ ಹಾಗೂ ವಿಪತ್ತಿಗೆ ಒಳಗಾದ ಇತರರನ್ನೂ ಹೇಗೆ ಸಂರಕ್ಷಿಸಬೇಕು ಎನ್ನುವ ಬಗ್ಗೆ ತಿಳಿದಿರಬೇಕು. ಈ ಉದ್ದೇಶದಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ನದಿ ನೀರಿನಿಂದ ಸಂರಕ್ಷಣೆ ಮಾಡುವ ಬಗ್ಗೆ ಇಲ್ಲಿ ಅಣಕು ಪ್ರದರ್ಶನ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಮಾತನಾಡಿ, ವಿಪತ್ತು ಪರಿಸ್ಥಿತಿಗಳ ಎದುರಿಸುವ ಚತುರತೆ, ಧೈರ್ಯ ವಿದ್ಯಾರ್ಥಿ ದಿಸೆಯಲ್ಲಿಯೇ ಹೊಂದಿದ್ದರೆ ಸಮಾಜಕ್ಕೆ ನೆರವಾಗುತ್ತದೆ ಎಂದರು.
ಎಸ್‌ಡಿಆರ್‌ಎಫ್ ಅಧಿಕಾರಿಗಳು ನೀರಿನಲ್ಲಿ ಮುಳುಗಿದವರನ್ನು ರಕ್ಷಣೆ ಮಾಡುವುದನ್ನು ನದಿಯಲ್ಲಿ ಬೋಟ್‌ಗಳ ಮೂಲಕ ತಮ್ಮ ಸಿಬ್ಬಂದಿ ನೆರವಿನಿಂದ ಪ್ರಾತ್ಯಕ್ಷಿಕೆ, ರಕ್ಷಣಾ ಕಾರ್ಯಾಚರಣೆಗಳ ವಿಧಾನಗಳನ್ನು ಪ್ರದರ್ಶಿಸಿದರು.ವಿಪತ್ತು ಸ್ಪಂದನ ಪಡೆಯ ಎಸ್.ಐ. ಕಿರಣ್, ಫೈರ್ ಆಫೀಸರ್ ಮಹಾಲಿಂಗಪ್ಪ, ರೀಜನಲ್ ಫೈರ್ ಆಫೀಸರ್ ನಾಗೇಶ್, ಹೊನ್ನಾಳಿ ಉಪವಿಭಾಗಾಧಿಕಾರಿ ಎಚ್.ಬಿ. ಚನ್ನಪ್ಪ, ಹೊನ್ನಾಳಿ ತಹಸೀಲ್ಲಾರ್ ರಾಜೇಶ್ ಕುಮಾರ್, ನ್ಯಾಮತಿ ತಹಸೀಲ್ದಾರ್ ಕವಿರಾಜ್, ಹೊನ್ನಾಳಿ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್, ತಾ.ಪಂ. ಅಧಿಕಾರಿ ಪ್ರಕಾಶ್, ಶಿಕ್ಷಣ ಇಲಾಖೆಯ ತಿಪ್ಪೇಶಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್, ಎ.ಎಸ್.ಐ. ಹರೀಶ್ ಸೇರಿದಂತೆ ಎನ್.ಡಿ.ಆರ್.ಎಫ್. ಹಾಗೂ ಎಸ್.ಡಿ.ಆರ್.ಎಫ್. ಪಡೆಗಳು, ದೂರಸಂಪರ್ಕ ಇಲಾಖೆಯವರು, ಕಂದಾಯ ಇಲಾಖೆ ಅಧಿಕಾರಿಗಳು, ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಇದ್ದರು.