ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಿಕೊಳ್ಳುವ ಮೂಲಕ ಪ್ರತಿಯೊಬ್ಬರು ರಾಷ್ಟ್ರ ಭಕ್ತಿ, ಪ್ರೇಮ ಹೆಚ್ಚಿಸಿಕೊಳ್ಳಬೇಕು ಎಂದು ಬೆಂಗಳೂರಿನ ರಾಷ್ಟ್ರ ಸಂರಕ್ಷಣಾ ಪರಿಷತ್ತಿನ ಅಧ್ಯಕ್ಷ ಟಿ.ಎನ್.ರಾಮಕೃಷ್ಣ ಕರೆ ನೀಡಿದರು.ಪಟ್ಟಣದ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿ, ಸ್ವಾತ್ಯಂತ್ರ್ಯ ಹೋರಾಟಕ್ಕಾಗಿ ನಮ್ಮ ಹಿರಿಯರು ಮಾಡಿದ ತ್ಯಾಗ ಮತ್ತು ಬಲಿದಾನದ ಅರಿವನ್ನು ನಮ್ಮ ಇಂದಿನ ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಬ್ರಿಟಿಷರಿಂದ ನಮಗೆ ಸ್ವಾತ್ಯಂತ್ರ್ಯ ಸಿಕ್ಕಿದ್ದಲ್ಲ, ಬದಲಾಗಿ ಗಳಿಸಿದ್ದು ಎನ್ನುವುದನ್ನು ನಮ್ಮ ಇಂದಿನ ಪೀಳಿಗೆ ಮರೆತಿರುವುದರಿಂದಲೇ ನಮ್ಮ ಮಕ್ಕಳಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತಗೊಳ್ಳುತ್ತಿಲ್ಲ. ಭಾರತದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಸಾವಿರ ವರ್ಷಗಳ ಹೋರಾಟ, ಪಠ್ಯಪುಸ್ತಕದ ಹೊರತಾಗಿ ಈಗಿನ ವಿದ್ಯಾರ್ಥಿಗಳು ಅರಿಯದ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರ ಹೆಸರುಗಳನ್ನು ಮತ್ತು ಅವರ ವಿಶಿಷ್ಠ ಸಾಧನೆ ತಿಳಿಸಿದರು.ಹಲವು ಮಹಾಪುರುಷರು ಸ್ವಾತಂತ್ರ್ಯಕ್ಕಾಗಿ , ದೇಶಕ್ಕಾಗಿ ಹುತಾತ್ಮರಾದ ಕುತೂಹಲಕಾರಿ ಘಟನೆಗಳನ್ನು ವಿರಿಸಿದರು. ಸುಮಾರು 35ಕ್ಕೂ ಹೆಚ್ಚು ಹೋರಾಟಗಾರರ ಬಟ್ಟೆಯ ಮೇಲೆ ಬರೆದ ಭಾವಚಿತ್ರವನ್ನು ಪ್ರದರ್ಶನ ಮಾಡುವ ಮೂಲಕ ಅವರ ಪರಿಚಯ ಮಾಡಿಕೊಟ್ಟ ರಾಮಕೃಷ್ಣ ಇಂದಿನ ಯುವ ಪೀಳಿಗೆ ದೇಶದ ನಿಜವಾದ ನಾಯಕರನ್ನು ಅನುಕರಿಸದೆ ಸಿನಿಮಾದಲ್ಲಿ ನಟಿಸುವ ಕಲಾವಿದರನ್ನೇ ನಾಯಕರಂದು ಅನುಕರಿಸುತ್ತಿರುವುದು ಶೋಚನೀಯ ಸಂಗತಿ ಎಂದು ವಿಷಾದಿಸಿದರು.
ಇಂದಿನ ಮಕ್ಕಳು ಹೋರಾಟಗಾರರ ಬಲಿದಾನವನ್ನು ಸ್ಮರಿಸುವುದರೊಂದಿಗೆ ಗೌರವ ಸಲ್ಲಿಸಬೇಕು. ಜೊತೆಗೆ ದೇಶದ ಸತ್ಪ್ರಜೆಯಾಗಿ ಸಂವಿಧಾನದ ಆಶಯಗಳಿಗೆ ಬೆಲೆ ಕೊಟ್ಟು ಸರಕಾರದ ಸವಲತ್ತುಗಳನ್ನು ಪೋಲು ಮಾಡದೆ ನಾಗರಿಕ ಕರ್ತವ್ಯವನ್ನು ಮರೆಯಬಾರದೆಂದು ತಿಳಿಸಿದರು.ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಕೆ.ಕಾಳೇಗೌಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ನಂದಿನಿ, ಶಿಕ್ಷಕರಾದ ಬೀರೇಶ್ ಸಬೀನಾ ಉಪಸ್ಥಿತರಿದ್ದರು. ಇದೇ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಪೋಟೋ ಪ್ರದರ್ಶನ ಗಮನ ಸೆಳೆಯಿತು.