ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಕಳೆದ ಒಂದು ತಿಂಗಳಿನಿಂದಲೂ ಅಂಚೆ ಕಚೇರಿಯಲ್ಲಿ ಪದೇ ಪದೇ ಸರ್ವರ್ ಸಮಸ್ಯೆ ಕಾಡುತ್ತಿದೆ. ಇದರಿಂದ ಸ್ಪೀಡ್ ಪೋಸ್ಟ್, ನೋಂದಾಯಿತ ಅಂಚೆ ಮುಂತಾದವುಗಳಿಗೆ ಸಮಸ್ಯೆ ಎದುರಾಗಿದೆ. ಸರ್ವರ್ ಸಮಸ್ಯೆ ಪರಿಹರಿಸಿ ಗ್ರಾಹಕರಿಗೆ ಸುಲಲಿತ ಸೇವೆ ನೀಡಲು ಅಂಚೆ ಇಲಾಖೆ ಸಂಪೂರ್ಣ ವಿಫಲವಾಗಿದೆ.
ಕಾರ್ಯ ನಿರ್ವಹಣಾ ಟೇಬಲ್‌ಗಳ ಮುಂದೆ ಅಂತರ್ಜಾಲ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸೇವೆ ಸ್ಥಗಿತಗೊಳಿಸಲಾಗಿದೆ ಸಹಕರಿಸಿ ಎಂದು ನಾಮಫಲಕ ಹಾಕಲಾಗಿದೆ. ಅಂಚೆ ಇಲಾಖೆ ಸ್ಪೀಡ್ ಪೋಸ್ಟ್ ಮತ್ತಿತರ ಸೇವೆಗಳು ನೆಟ್‌ವರ್ಕ್ ಸಮಸ್ಯೆಯಿಂದ ಪದೇ ಪದೇ ಸ್ಥಗಿತಗೊಳ್ಳುತ್ತಿರುವುದರಿಂದ ಸಾರ್ವಜನಿಕರು ಖಾಸಗಿ ಅಂಚೆ ಸೇವೆಗಳಿಗೆ ದುಬಾರಿ ಬೆಲೆತೆತ್ತು ತಮ್ಮ ಕಾಗದ ಪತ್ರಗಳನ್ನು ಇತರರಿಗೆ ಕಳುಹಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.ಅಂಚೆ ಇಲಾಖೆ ಸರ್ವರ್ ಸಮಸ್ಯೆಯಿಂದ ಕೆಲವು ಜನ ನಿಗದಿತ ಸಮಯದಲ್ಲಿ ತಮ್ಮ ಸಾಲ ಮತ್ತಿತರ ಕಂತಿನ ಹಣ ಸಕಾಲದಲ್ಲಿ ಪಾವತಿಸಲಾಗದೆ ದಂಡ ಕಟ್ಟುವಂತಾಗಿದೆ. ಈ ಬಗ್ಗೆ ಸಾರ್ವಜನಿಕರೊಬ್ಬರು ಅಂಚೆ ಸೇವೆಯ ಹಿಂದೆ ವ್ಯವಸ್ಥಿತ ದುರುದ್ದೇಶ ಕೆಲಸ ಮಾಡುತ್ತಿರುವ ಸಂದೇಹ ವ್ಯಕ್ತಪಡಿಸಿದರು.
ಸುಲಲಿತ ಸಾರ್ವಜನಿಕ ಸೇವೆ ನೀಡದೆ ಈಗಾಗಲೇ ಬಿ.ಎಸ್.ಎನ್.ಎಲ್ (ಭಾರತೀಯ ದೂರಸಂಪರ್ಕ ಇಲಾಖೆ) ಮುಚ್ಚುವ ಹಂತಕ್ಕೆ ತಂದು ನಿಲ್ಲಿಸಲಾಗಿದೆ. ಇದೇ ತಂತ್ರಗಾರಿಕೆಯ ಮೂಲಕ ಲಾಭದಾಯಕವಾಗಿರುವ ಅಂಚೆ ಇಲಾಖೆಯನ್ನು ಮುಚ್ಚಿಸಿ ಖಾಸಗಿ ಅಂಚೆ ಸೇವೆಗಳಿಗೆ ನೆರವು ನೀಡುವ ಕುತಂತ್ರ ಅಂಚೆ ಇಲಾಖೆಯ ಸರ್ವರ್ ಸಮಸ್ಯೆಯ ಹಿಂದೆ ಕಾಣುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.ತಕ್ಷಣವೇ ಅಂಚೆ ಇಲಾಖೆ ಮೇಲಾಧಿಕಾರಿಗಳು ತಮ್ಮ ಕಾರ್ಯ ಬದ್ದತೆಯನ್ನು ಪ್ರದರ್ಶಿಸಿ ಪದೇ ಪದೇ ಕಾಡುತ್ತಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸಿ ಪೋಸ್ಟಲ್ ಗ್ರಾಹಕರಿಗೆ ಸುಗಮ ಸೇವೆ ನೀಡುವಂತೆ ಒತ್ತಾಯಿಸಿದ್ದಾರೆ.