ಬಾಗಲಕೋಟೆ : ನವನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಮುಖ್ಯವಾಗಿ ನವನಗರದ ನಾಗರಿಕರು ಸಹಕಾರ ನೀಡಬೇಕು. ಸ್ವಚ್ಛತೆ ವಿಷಯದಲ್ಲಿ ಯಾರೇ ನಿರ್ಲಕ್ಷ್ಯ ಮಾಡಿದರೂ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಮುಖ್ಯವಾಗಿ ನವನಗರದ ನಾಗರಿಕರು ಸಹಕಾರ ನೀಡಬೇಕು. ಸ್ವಚ್ಛತೆ ವಿಷಯದಲ್ಲಿ ಯಾರೇ ನಿರ್ಲಕ್ಷ್ಯ ಮಾಡಿದರೂ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೂಚಿಸಿದರು.
ನವನಗರದ ಸೆಕ್ಟರ್ ನಂ.35ರಲ್ಲಿ ಬಿಟಿಡಿಎದಿಂದ ಶುಕ್ರವಾರ ಆರಂಭಿಸಿದ ಸ್ವಚ್ಛತಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಠಿಣ ಕ್ರಮದ ಎಚ್ಚರಿಕೆ :
ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟಾಗ ಮಾತ್ರ ಸಾಂಕ್ರಾಮಿಕ ರೋಗಗಳಿಂದ ದೂರ ಇರಲು ಸಾಧ್ಯ. ಬಿಟಿಡಿಎದಿಂದ ನವನಗರ ಯೂನಿಟ್-1 ಮತ್ತು 2ರಲ್ಲಿ ಸ್ವಚ್ಛತಾ ಸಪ್ತಾಹ ಆರಂಭಿಸಲಾಗಿದೆ. ನವನಗರದ ಪ್ರತಿಯೊಂದು ಸೆಕ್ಟರ್ ಕೂಡ ಸ್ವಚ್ಛವಾಗಿರಬೇಕು. ಇದಕ್ಕಾಗಿ ಬಿಟಿಡಿಎ ಅಧಿಕಾರಿಗಳು, ಕಸ ಸಂಗ್ರಹದ ಗುತ್ತಿಗೆದಾರರು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸ್ವಚ್ಛತೆ ವಿಷಯದಲ್ಲಿ ಯಾರೇ ನಿರ್ಲಕ್ಷ್ಯ ವಹಿಸುವಂತಿಲ್ಲ. ಗುತ್ತಿಗೆದಾರರು ಕಡ್ಡಾಯವಾಗಿ ತಮಗೆ ವಹಿಸಿದ ಸೆಕ್ಟರ್‌ಗಳಲ್ಲಿ ನಿರಂತರ ಸ್ವಚ್ಛತೆ ನೋಡಿಕೊಳ್ಳಬೇಕು. ಇದಕ್ಕಾಗಿ ಬಿಟಿಡಿಎದಿಂದ ಉಸ್ತುವಾರಿ ಅಧಿಕಾರಿಗಳಿದ್ದು, ಸ್ವಚ್ಛತೆಯ ಬಗ್ಗೆ ನಿಗಾ ಇಟ್ಟಿರಬೇಕು. ಅಸಡ್ಡೆ ತೋರುವ ಅಧಿಕಾರಿ-ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಾಗೃತಿ ಮೂಡಿಸಿ : ಸ್ವಚ್ಛತೆ ವಿಷಯದಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಕೆಲವರು, ಕಸ, ನಿರುಪಯುಕ್ತ ಬಟ್ಟೆ, ಮುಸುರಿ ಚರಂಡಿಗೆ ಹಾಕುತ್ತಾರೆ. ಮನೆ ಮನೆಗೆ ಕಸ ಸಂಗ್ರಹ ವಾಹನ ಬಂದರೂ, ಚರಂಡಿಗೆ ಕಸ ಹಾಕುವವರ ಮೇಲೆ ನಿಗಾ ಇಡಬೇಕು. ಮೊದಲು ಅವರಿಗೆ ಚರಂಡಿಗೆ ಕಸ ಹಾಕದಂತೆ ಜಾಗೃತಿ ಮೂಡಿಸಿ. ತಿಳಿವಳಿಕೆ ಹೇಳಿದ ಬಳಿಕವೂ ಚರಂಡಿಗೆ ಕಸ ಹಾಕಿದರೆ ಅವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಬಿಟಿಡಿಎದಿಂದ ನಡೆಯುವ ಸ್ವಚ್ಛತಾ ಸಪ್ತಾಹವನ್ನು ಶಿಸ್ತುಬದ್ಧವಾಗಿ ನಡೆಸಬೇಕು. ಯಾವ ಏರಿಯಾದಲ್ಲಿ ಯಾವ ದಿನ ಸ್ವಚ್ಛತೆ ಮಾಡಬೇಕು ಎಂಬುವುದರ ವೇಳಾಪಟ್ಟಿ ಹಾಕಿಕೊಳ್ಳಬೇಕು. ನಾನೂ ಕೂಡ ಪ್ರತಿದಿನ ಈ ಸಪ್ತಾಹದಲ್ಲಿ ಭಾಗವಹಿಸಲಿದ್ದೇನೆ ಎಂದು ಹೇಳಿದರು.
ಸ್ವಚ್ಛತೆ ಬಗ್ಗೆ ಈವರೆಗೆ ಹೆಚ್ಚು ಮುತುವರ್ಜಿ ವಹಿಸಿಲ್ಲ. ನವನಗರದ ರಸ್ತೆ ಪಕ್ಕದಲ್ಲೇ ಕಸ ಬಿದ್ದಿರುತ್ತದೆ. ಈ ರೀತಿಯ ನಿರ್ಲಕ್ಷ್ಯ ಸಹಿಸುವುದಿಲ್ಲ. ಸ್ವಚ್ಛತೆ ನವನಗರಕ್ಕಾಗಿ ಸಪ್ತಾಹ ಹಾಕಿಕೊಳ್ಳಲಾಗಿದೆ. ಸ್ವಚ್ಛತೆ, ಕುಡಿಯುವ ನೀರು ಸಹಿತ ಮೂಲ ಸೌಲಭ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ. ಬಿಟಿಡಿಎದಿಂದ ನಡೆಯುವ ಪ್ರತಿಯೊಂದು ಕೆಲಸಕ್ಕೆ ವೇಗ ನೀಡಲು ಪ್ರಯತ್ನ ನಡೆದಿದೆ.
-ಪ್ರಕಾಶ ತಪಶೆಟ್ಟಿ ಅಧ್ಯಕ್ಷರು ಬಿಟಿಡಿಎ, ಬಾಗಲಕೋಟೆ
ನೂತನ ಅಧ್ಯಕ್ಷರು ಮತ್ತು ಶಾಸಕರು ಬಂದ ಬಳಿಕ, ಬಿಟಿಡಿಎದಿಂದ ಹಲವಾರು ಕಾರ್ಯಕ್ರಮಗಳಿಗೆ ವೇಗ ನೀಡಲಾಗಿದೆ. ಅಧ್ಯಕ್ಷರ ವಿಶೇಷ ಆಸಕ್ತಿ ಮೇರೆಗೆ ಸ್ವಚ್ಛತಾ ಸಪ್ತಾಹ ಹಮ್ಮಿಕೊಂಡಿದ್ದು, ಒಂದು ವಾರದಲ್ಲಿ ನಮ್ಮ ವಿಭಾಗ ವ್ಯಾಪ್ತಿಯ ಪ್ರತಿಯೊಂದು ಸೆಕ್ಟರ್‌ಗಳಲ್ಲೂ ಸ್ವಚ್ಛತೆ ನಡೆಯಲಿದೆ. ಮುಖ್ಯವಾಗಿ ಸಾರ್ವಜನಿಕರು, ಚರಂಡಿಗೆ ಕಸ ಹಾಕುವುದು ನಿಲ್ಲಿಸಬೇಕು. ಇದಕ್ಕಾಗಿ ಜಾಗೃತಿ ಮೂಡಿಸಲಾಗುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.