ರಸ್ತೆಗಳು ಜಲಾವೃತಗೊಂಡ ಬಳಿಕಎಚ್ಚೆತ್ತು ಚರಂಡಿ ಸ್ವಚ್ಛತೆಗಿಳಿದ ಜಿಬಿಎ

KannadaprabhaNewsNetwork |  
Published : May 30, 2026, 03:30 AM IST
ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಮೋರಿ ಸ್ವಚ್ಛತಾ ಕಾರ್ಯ. | Kannada Prabha

ಸಾರಾಂಶ

ನಗರದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾದ ಬಳಿಕ ಮೋರಿ, ಚರಂಡಿ ಹಾಗೂ ರಾಜಕಾಲುವೆ ಹೂಳೆತ್ತುವ ಕೆಲಸಕ್ಕೆ ಈಗ ವೇಗ ನೀಡಲಾಗಿದೆ. ಆದರೆ, ಈ ಕಾರ್ಯ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾದ ಬಳಿಕ ಮೋರಿ, ಚರಂಡಿ ಹಾಗೂ ರಾಜಕಾಲುವೆ ಹೂಳೆತ್ತುವ ಕೆಲಸಕ್ಕೆ ಈಗ ವೇಗ ನೀಡಲಾಗಿದೆ. ಆದರೆ, ಈ ಕಾರ್ಯ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತಿದೆ.

ಪಾಲಿಕೆಗಳು ಪೂರ್ವ ಮುಂಗಾರು ಆರಂಭಕ್ಕೂ ಮೊದಲೇ ಮೋರಿ ಮತ್ತು ಚರಂಡಿಗಳ ಹೂಳು ಎತ್ತದ ಕಾರಣ, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ನಗರದ ಅನೇಕ ರಸ್ತೆಗಳು ಜಲಾವೃತಗೊಂಡು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿದೆ. ರಸ್ತೆ ಬದಿಯ ಸಣ್ಣ ಚರಂಡಿಗಳಲ್ಲಿ ಪ್ಲಾಸ್ಟಿಕ್, ಕಸ ಮತ್ತು ಕಟ್ಟಡದ ಅವಶೇಷಗಳು ತುಂಬಿಕೊಂಡಿವೆ. ಮಳೆ ಬಂದಾಗ ನೀರು ಚರಂಡಿಯೊಳಗೆ ಹೋಗಲು ಜಾಗವಿಲ್ಲದೆ, ರಸ್ತೆಗಳ ಮೇಲೆಯೇ ಮೊಣಕಾಲುದ್ದ ನಿಲ್ಲುತ್ತಿದೆ. ದೊಡ್ಡ ಮೋರಿ ಮತ್ತು ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ, ಅವುಗಳಲ್ಲಿ ನೀರು ಸರಿಯಾಗಿ ಹರಿಯುತ್ತಿಲ್ಲ. ಇದರಿಂದಾಗಿ ಅಲ್ಪ ಮಳೆಗೇ ಮೋರಿಗಳು ಉಕ್ಕಿ ಹರಿದು ಪಕ್ಕದ ರಸ್ತೆ ಮತ್ತು ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ.

ರಸ್ತೆ ಬದಿಯ ಚರಂಡಿಗಳು ದೊಡ್ಡ ಮೋರಿಯನ್ನು ಸೇರುವ ಜಾಗಗಳಲ್ಲಿ ಹೂಳು ಹಾಗೇ ಉಳಿದಿರುವುದರಿಂದ ವಾಪಸ್ ರಸ್ತೆಗಳಿಗೆ ಮತ್ತು ತಗ್ಗು ಪ್ರದೇಶಗಳ ಅಂಡರ್‌ಪಾಸ್‌ಗಳಿಗೆ ಮಳೆ ನೀರು ನುಗ್ಗುತ್ತಿದೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

ವಾಪಸ್ ಮೋರಿಗೆ ಕಸ!

ರಸ್ತೆ ಬದಿಯ ಚರಂಡಿಯಲ್ಲಿನ ತ್ಯಾಜ್ಯ ತೆಗೆದು ಮೋರಿ ಪಕ್ಕದಲ್ಲೇ ಹಾಕಲಾಗುತ್ತದೆ. ತೇವ ಇರುವ ಕಾರಣ ತ್ಯಾಜ್ಯವನ್ನು ಕೂಡಲೇ ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗದು. ಒಂದೆರೆಡು ದಿನ ಅಲ್ಲೇ ಬಿಟ್ಟರೆ ಒಣಗುತ್ತದೆ ಎಂದು ಅಲ್ಲೇ ಬಿಡಲಾಗುತ್ತದೆ. ಆದರೆ, ಪ್ರತಿದಿನ ಸಂಜೆ ಮಳೆ ಬರುತ್ತಿರುವುದರಿಂದ ಅದೆಲ್ಲಾ ವಾಪಸ್ ಮೋರಿಗೆ ಸೇರುತ್ತಿದೆ.

ಪೊಲೀಸರ ಸಲಹೆ ಪಡೆದರೂ ಸಾಕು

ಮಳೆಯಲ್ಲಿ ಸಂಚಾರ ವ್ಯವಸ್ಥೆ ಸರಿಪಡಿಸಲು ಪರದಾಡುವ ಸಂಚಾರ ಪೊಲೀಸರಿಗೆ ಜಲಾವೃತವಾಗುವ ಪ್ರದೇಶಗಳ ಮಾಹಿತಿ ಇದೆ. ಅಂತಹ ಸ್ಥಳಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮೋರಿ, ಚರಂಡಿ ಸ್ವಚ್ಛಗೊಳಿಸಿ ಅಗತ್ಯ ಕಾಮಗಾರಿ ಕೈಗೊಂಡರೆ ಜಲಾವೃತವಾಗುವ ಪರಿಸ್ಥಿತಿ ತಪ್ಪುತ್ತದೆ ಎಂದು ಸಾರ್ವಜನಿಕರು ಜಿಬಿಎಗೆ ಒತ್ತಾಯಿಸಿದ್ದಾರೆ.

ಸಿಲ್ಕ್‌ಬೋರ್ಡ್ ಜಲಾವೃತ: ಸಿಲ್ಕ್‌ಬೋರ್ಡ್ ಮೆಟ್ರೋ ನಿಲ್ದಾಣದ ಕೆಳಗೆ ಹಾಗೂ ಡಬ್ಬಲ್ ಡೆಕ್ಕರ್ ಫ್ಲೈಓವರ್ ಬಳಿ ಸ್ವಲ್ಪವೇ ಮಳೆ ಬಂದರೂ ಒಂದು ಅಡಿಗೂ ಹೆಚ್ಚು ನೀರು ನಿಲ್ಲುತ್ತಿದೆ. ಮಳೆ ನೀರು ಹರಿದು ಹೋಗಲು ಸೂಕ್ತ ಮೋರಿ, ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ರಾಜಕಾಲುವೆಗೆ ಸಂಪರ್ಕಿಸುವ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡಿರುವುದರಿಂದ ಸಿಲ್ಕ್‌ಬೋರ್ಡ್ ಮೆಟ್ರೋ ನಿಲ್ದಾಣ ಜಲಾವೃತಗೊಳ್ಳುತ್ತಿದೆ. ಈ ಕುರಿತು ಅನೇಕ ವಾಹನ ಸವಾರರು ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗೆ ಗೋಡೆ ಕುಸಿದು ಮತ್ತೊಂದು ಬಲಿ
ಇಂದಿನಿಂದ ಮನೆ ಬಾಗಿಲಿಗೆ ಮಾವಿನ ಹಣ್ಣು