
ನರಗುಂದ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹೆಚ್ಚಿಸಲು ಹರ ಘರ ತಿರಂಗಾ ಯಾತ್ರೆಯನ್ನು ಕಳೆದ ಮೂರು ದಿನಗಳಿಂದ ದೇಶಾದ್ಯಂತ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ ಸಾಕಷ್ಟು ಜನಪರ ಯೋಜನೆ ಜಾರಿ ಮಾಡಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ಶನಿವಾರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ದಿನದ ಸಂಭ್ರಮ ಅನೇಕ ಹೋರಾಟಗಾರರ ತ್ಯಾಗ ಬಲಿದಾನದ ಫಲವಾಗಿದೆ. ಆದರೆ ಈ ಸ್ವಾತಂತ್ರ್ಯ ಯುವಪೀಳಿಗೆಯಿಂದ ಸದ್ಬಳಕೆಯಾಗಬೇಕಿದೆ. ಯುವಶಕ್ತಿಯಾಗಿರುವ ಜೆನ್ ಝೀಗಳು ದೇಶವನ್ನು ಸದೃಢಗೊಳಿಸಲು, ದೇಶವನ್ನು ಬಲಾಢ್ಯಗೊಳಿಸಲು ಬಳಸಬೇಕು. ವಿದೇಶಿ ಸಂಘಟನೆಗೆ ಕೈಜೋಡಿಸದೇ, ವಿದೇಶಿಗರ ಮಾತು ಕೇಳಿ ಹಾಳಾಗದೇ ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ದೇಶ ಕಟ್ಟುವಲ್ಲಿ, ಒಗ್ಗೂಡಿಸುವಲ್ಲಿ ಜೆನ್ ಝೀಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು. ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಯುವಕರು ಸ್ವಾತಂತ್ರ್ಯ ಚರಿತ್ರೆ ಅರಿಯಬೇಕು. ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ತಮ್ಮ ಹಕ್ಕು, ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.