ರಾಜ್ಯದ 180ಕ್ಕೂ ಅಧಿಕ ತಾಲೂಕುಗಳಲ್ಲಿ ಬರ: ರಾಯರಡ್ಡಿ

KannadaprabhaNewsNetwork |  
Published : Aug 16, 2026, 03:15 AM IST
ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಮಾತನಾಡಿದರು. | Kannada Prabha

ಸಾರಾಂಶ

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಹೇಳಿದ್ದೆ. ಬರ ನಿರ್ವಹಣೆಯ ಉಸ್ತುವಾರಿ ನೋಡಿಕೊಂಡು, ಕೆಲಸ ಮುಗಿಸಿ ನಮಸ್ಕಾರ ಹೊಡೆದು ಹೋಗಬೇಕು ಅಂದುಕೊಂಡಿದ್ದೆ. ಆದರೆ ಮುಖ್ಯಮಂತ್ರಿಗಳು ನೀವೇ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಗದಗ: ರಾಜ್ಯದಲ್ಲಿರುವ 240 ತಾಲೂಕುಗಳ ಪೈಕಿ 180ಕ್ಕೂ ಹೆಚ್ಚು ತಾಲೂಕುಗಳು ಭೀಕರ ಬರಕ್ಕೆ ತುತ್ತಾಗಿವೆ. ಕಳೆದ ಎರಡು, ಮೂರು ದಶಕಗಳಲ್ಲೇ ಇಂತಹ ಭೀಕರ ಪರಿಸ್ಥಿತಿಯನ್ನು ನೋಡಿಲ್ಲ. ರಾಜ್ಯ ಸರ್ಕಾರವು ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಸಭೆ ನಡೆಸಿ ವಸ್ತುಸ್ಥಿತಿ ಪರಿಶೀಲಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಕೇಂದ್ರಕ್ಕೆ ವಾರ್ಷಿಕ ₹4.5 ಲಕ್ಷ ಕೋಟಿ ತೆರಿಗೆ ಸಂದಾಯವಾಗುತ್ತಿದ್ದರೂ, ನಮಗೆ ಮರಳಿ ಸಿಗುತ್ತಿರುವುದು ಕೇವಲ ₹68 ಸಾವಿರ ಕೋಟಿ ಮಾತ್ರ. ಕುಟುಂಬದಲ್ಲಿ ಹೆಚ್ಚು ದುಡಿಯುವ ದೊಡ್ಡಣ್ಣ ಉಳಿದವರಿಗೂ ಹಂಚುವಂತೆ, ನಮ್ಮ ತೆರಿಗೆ ಹಣವನ್ನು ಕಡಿಮೆ ವರಮಾನವಿರುವ ರಾಜ್ಯಗಳಿಗೆ ನೀಡಲಾಗುತ್ತದೆ. ಆದರೆ, ಪ್ರಸ್ತುತ ರಾಜ್ಯವು ಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರವು ತಕ್ಷಣವೇ ಅಧಿಕಾರಿಗಳ ಅಧ್ಯಯನ ತಂಡವನ್ನು ಕಳುಹಿಸಿ, ಸೂಕ್ತ ಪರಿಹಾರಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಆಡಳಿತದ ಲೋಪ: ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ಹುದ್ದೆಗಳು ದೀರ್ಘಕಾಲದಿಂದ ಖಾಲಿ ಇರುವ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಸಚಿವರು ವ್ಯವಸ್ಥೆಯ ಮಿತಿಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನೇ ಎಲ್ಲವನ್ನೂ ತಕ್ಷಣವೇ ಬದಲಾಯಿಸಲು ಸಾಧ್ಯವಿಲ್ಲ. ಒಬ್ಬ ಪಿಡಿಒ ವರ್ಗಾವಣೆಗೂ ಸಂಬಂಧಪಟ್ಟ ಇಲಾಖೆಯ ಸಚಿವರ ಅನುಮೋದನೆ ಅಗತ್ಯವಿರುತ್ತದೆ. ಉಸ್ತುವಾರಿ ಸಚಿವರು ಆಡಳಿತ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬಹುದು. ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ನನಗೆ ಕೇವಲ 10ರಿಂದ 15 ದಿನಗಳ ಕಾಲಾವಕಾಶ ನೀಡಿ, ಎಲ್ಲ ಅವ್ಯವಸ್ಥೆಗಳನ್ನು ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ರಾಜಕೀಯ ಆಶ್ರಯ, ಮೈಗಳ್ಳತನ: ಜಿಲ್ಲೆಯಲ್ಲಿ ಕೆಲವು ಅಧಿಕಾರಿಗಳು ರಾಜಕೀಯ ನಾಯಕರ ಬೆಂಬಲ ನೆಚ್ಚಿಕೊಂಡು ನಿರ್ಲಕ್ಷ್ಯ ಹಾಗೂ ನಿಧಾನಗತಿಯ ಧೋರಣೆ ತೋರುತ್ತಿದ್ದಾರೆ. ಇನ್ನು ಕೆಲವರು ಸಂಪೂರ್ಣ ಮೈಗಳ್ಳರಾಗಿದ್ದಾರೆ. ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿದರೆ, ತಮಗೆ ಇಷ್ಟವಾದ ಜಾಗ ಸಿಗುವವರೆಗೆ ಬರುವುದಿಲ್ಲ; ರಾಜಕೀಯ ಒತ್ತಡ ತರುತ್ತಾರೆ.

ಜಿಲ್ಲೆಯ ಕೆಲ ಅಧಿಕಾರಿಗಳ ವರ್ತನೆಯನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಸಭೆಗಳಲ್ಲಿ ಕಾಲು ಅಲ್ಲಾಡಿಸಿಕೊಂಡು ಕುಳಿತುಕೊಳ್ಳುವುದು, ಬೇಜವಾಬ್ದಾರಿಯಿಂದ ವರ್ತಿಸುವುದು ಕಂಡುಬಂದಿದೆ. ಸಭೆಯ ಘನತೆ ಕಾಪಾಡುವ ಬಗ್ಗೆ ಸೂಚನೆ ನೀಡಿದ್ದೇನೆ. ಎಚ್ಚರಿಕೆಯನ್ನು ಧಿಕ್ಕರಿಸಿ ಅಶಿಸ್ತು ಪ್ರದರ್ಶಿಸುವ ಅಧಿಕಾರಿಗಳನ್ನು ಮುಲಾಜಿಲ್ಲದೆ ತಕ್ಷಣವೇ ಅಮಾನತು ಮಾಡಲಾಗುವುದು ಎಂದರು.

ನನಗೆ ಜಿಲ್ಲಾ ಉಸ್ತುವಾರಿ ಬೇಡ ಎಂದಿದ್ದೆ: ಸಚಿವ ರಾಯರಡ್ಡಿ

ಗದಗ: ಗದಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬೇಡ ಎಂದು ಹೇಳಿದ್ದೆ. ಬರ ನಿರ್ವಹಣೆಯ ಉಸ್ತುವಾರಿ ನೋಡಿಕೊಂಡು, ಕೆಲಸ ಮುಗಿಸಿ ನಮಸ್ಕಾರ ಹೊಡೆದು ಹೋಗಬೇಕು ಅಂದುಕೊಂಡಿದ್ದೆ. ಆದರೆ ಮುಖ್ಯಮಂತ್ರಿಗಳು ನೀವೇ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದು ಸೂಚಿಸಿದರು ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅದೇ ರೀತಿ ಜಿಲ್ಲೆಯ ಹಿರಿಯ ನಾಯಕರಾದ ಎಚ್.ಕೆ. ಪಾಟೀಲ ಅವರು ಕೇಳಿಕೊಂಡ ಮೇಲೆ ನಾನು ಬೇಡ ಎನ್ನಲು ಸಾಧ್ಯವೇ? ಹೀಗಾಗಿ ಎಲ್ಲ ಹಿರಿಯರ ಹಾಗೂ ಮುಖಂಡರ ಸಲಹೆ, ಸಹಕಾರ ಪಡೆದು, ವಿರೋಧ ಪಕ್ಷದವರ ಸಲಹೆಗಳನ್ನು ಪಡೆದುಕೊಂಡು ಗದಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಸಚಿವರ ಸರಳತೆ: ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರ ಸರಳತೆ ಹಾಗೂ ನೇರ ನಡೆ ಸಾರ್ವಜನಿಕರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಪೋಡಿಯಂ ಬಳಿ ಆಗಮಿಸಿದ ಸಚಿವರು, ತಮ್ಮ ಸರಳತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವೇದಿಕೆ ಮೇಲೆ ಸಿಬ್ಬಂದಿ ಹಾಗೂ ಸಹಾಯಕರು ಇದ್ದರೂ ಅವರಿಗೆ ಯಾವುದೇ ಆದೇಶ ನೀಡದೆ, ತಮಗೆ ಬೇಕಾದ ಕುಡಿಯುವ ನೀರಿನ ಗ್ಲಾಸ್ ಅನ್ನು ತಾವೇ ಸ್ವತಃ ತೆಗೆದುಕೊಂಡು ಬಂದರು. ಒಂದು ಕೈಯಲ್ಲಿ ಭಾಷಣದ ಸಂದೇಶ ಪ್ರತಿ ಹಾಗೂ ಮತ್ತೊಂದು ಕೈಯಲ್ಲಿ ನೀರಿನ ಗ್ಲಾಸ್ ಹಿಡಿದುಕೊಂಡು ಪೋಡಿಯಂ ಬಳಿ ಬಂದ ಅವರು, ಗ್ಲಾಸ್ ಇಟ್ಟು ನಂತರ ತಮ್ಮ ಭಾಷಣವನ್ನು ಆರಂಭಿಸಿದರು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ಮೂಲಕ ಸಚಿವರು ಸರಳತೆಯ ಸಂದೇಶ ಸಾರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಪ್ಪಳ ಪ್ರಾಧಿಕಾರದಲ್ಲಿ ಕೋಟಿ ಕೋಟಿ ಲೂಟಿ!
ಜಿಲ್ಲೆಯಲ್ಲಿ 215 ಭಾರತ ಜೋಡೋ ಯುವ ಸಂಘ ಸ್ಥಾಪನೆ