ಕನ್ನಡಪ್ರಭ ವಾರ್ತೆ ಅರಸೀಕೆರೆ
ಎಲ್ಲಾ ಜೀವ ಜಲಗಳಿಗೆ ನೀರು ಅತ್ಯಮೂಲ್ಯವಾಗಿದ್ದು ಇದನ್ನು ಉಳಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಹೇಳಿದರು.ತಾಲೂಕಿನ ಸುಕ್ಷೇತ್ರ ಕೋಡಿಮಠದಲ್ಲಿ ರುದ್ರಾಕ್ಷ ಇಂಟರ್ ನ್ಯಾಷನಲ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೀರು ಉಳಿಸಿ ಜೀವ ಉಳಿಸಿ ಎಂಬ ಮನೆ ಮನೆಯ ನಾಮ ಫಲಕಕ್ಕೆ ಚಾಲನೆ ನೀಡಿ ಮಾತನಾಡಿ, ನೀರು ಭಗವಂತರ ದೇಣಿಗೆಯಾಗಿದ್ದು ದಿನ ಕಳೆದಂತೆ ನಾವು ನಮ್ಮ ಸುತ್ತಮುತ್ತಲಿನ ಪರಿಸರದ ಮೇಲೆ ಮಾಡುತ್ತಿರುವ ನಿರಂತರ ದಾಳಿಯಿಂದ ಮಳೆ ಕಡಿಮೆಯಾಗಲು ಪ್ರಾರಂಭಿಸಿದೆ. ಅಲ್ಲದೇ ಜೀವವು ಭೂಮಿಯ ಮೇಲೆ ಕಡಿಮೆಯಾಗುತ್ತಿದೆ ಇದರಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು ಸಾವಿರ ಅಡಿಗಳಿಗೆ ದಾಟಿದೆ ಇದನ್ನು ಮರುಕಳಿಸಲು ಎಲ್ಲರೂ ಪರಿಸರವನ್ನು ಪ್ರೀತಿಸುವ ಜತೆಯಲ್ಲಿ ನೀರಿನ ಮಿತ ಬಳಕೆಗೆ ಒತ್ತು ನೀಡಬೇಕಿದೆ, ಮನುಕುಲಕ್ಕೆ ನೀರಿನ ಲಭ್ಯತೆ ಅತಿ ಮುಖ್ಯವಾಗಿದೆ ಎಂದರು.ಹೊಸ ಸಂವತ್ಸರ ಪ್ರಾರಂಭವಾದಂತೆ ಪ್ರಕೃತಿ ತನ್ನ ಕಾರ್ಯವನ್ನು ಎಲ್ಲೆಡೆ ಮಳೆ ಇಲ್ಲದಿದ್ದರೂ ಸಹ ಹಳೆಯ ಎಲೆಗಳು ಉದುರಿ ಹೊಸ ಚಿಗುರು ಮೂಡಿಸಿದೆ. ಆದರೇ ಪರಿಸರದ ಸೌಂದರ್ಯಕ್ಕೆ ನಾವು ಧಕ್ಕೆ ಬಾರದಂತೆ ನಡೆದುಕೊಂಡರೇ ಮಾತ್ರ ಈ ಭೂಮಿಯ ಮೇಲೆ ನಮ್ಮೆಲ್ಲರ ಉಳಿವು ಎಂದರು.ರುದ್ರಾಕ್ಷ ಇಂಟರ್ ನ್ಯಾಷನಲ್ ಫೌಂಡೇಶನ್ ಸಂಸ್ಥಾಪಕರಾದ ಜೈ ಪ್ರಕಾಶ್ ಗುರೂಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ನೀರಿನ ಹಾಹಾಕಾರ ಹೆಚ್ಚಿದ್ದು ಇದರ ಬಳಕೆ ಮತ್ತು ಉಳಿವಿಕೆಯ ಬಗ್ಗೆ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ಕೆ ನಾವು ಮುಂದಾಗಿದ್ದು ಎಲ್ಲರೂ ಸಹಕರಿಸುವಂತೆ ಹೇಳಿದರು. ಈ ಸಂದರ್ಭದಲ್ಲಿ ಗಂಜಿಗೆರೆ ಚಂದ್ರಶೇಖರ್, ಬಿ. ಪರಮೇಶ್, ತೋಂಟೇಶ್ ಉಪಸ್ಥಿತರಿದ್ದರು.