ಪ್ರತಿಯೊಬ್ಬರೂ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿರಿಕೊಳ್ಳಬೇಕು: ನ್ಯಾ. ಬಿ.ಸಿ. ಭಾನುಮತಿ

KannadaprabhaNewsNetwork | Published : Oct 1, 2024 1:17 AM

ಚಿಕ್ಕಮಗಳೂರು, ಗಾಂಧೀಜಿಯವರು ಕಂಡ ಸ್ವಚ್ಛ ಭಾರತ ನಿರ್ಮಾಣದ ಕನಸನ್ನು ಇಂದು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶ (ಪ್ರಭಾರಿ) ರಾದ ಬಿ.ಸಿ. ಭಾನುಮತಿ ಕರೆ ನೀಡಿದರು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗಾಂಧೀಜಿಯವರು ಕಂಡ ಸ್ವಚ್ಛ ಭಾರತ ನಿರ್ಮಾಣದ ಕನಸನ್ನು ಇಂದು ನಾವೆಲ್ಲರೂ ಸಾಕಾರಗೊಳಿಸಬೇಕಾಗಿದೆ. ಪ್ರತಿಯೊಬ್ಬರು ತಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಧೀಶ (ಪ್ರಭಾರಿ) ರಾದ ಬಿ.ಸಿ. ಭಾನುಮತಿ ಕರೆ ನೀಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ವಕೀಲರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸ್ವಚ್ಛ್ ಭಾರತ್ ಮಿಷನ್ ಅಭಿಯಾನದ ಅಂಗವಾಗಿ ಸೋಮವಾರ ನಗರದ ಕೋರ್ಟ್ ಆವರಣದಲ್ಲಿ ಆಯೋಜಿಸ ಲಾಗಿದ್ದ ಸ್ವಚ್ಛತಾ ಹಿ ಸೇವಾ 2024ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶಾದ್ಯಂತ ಸಾರ್ವಜನಿಕ ಆಸ್ತಿಗಳು, ರಸ್ತೆಗಳು , ಸಮಾಜವನ್ನು ಸ್ವಚ್ಛವಾಗಿಡುವುದು ಮತ್ತು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದೆ. ಸ್ವಚ್ಛತೆ ಕಾಪಾಡುವುದರಿಂದ ಕೊಳಚೆಯಿಂದ ಹರಡುವ ಹಲವಾರು ಕಾಯಿಲೆಗಳನ್ನು ನಿಯಂತ್ರಿಸಬಹುದು ಎಂದರು.

ಉತ್ತಮ ಆಲೋಚನೆಗಳಿಂದ ಮಾನಸಿಕವಾಗಿ ಆರೋಗ್ಯವಂತರಾಗಿರಬಹುದು, ಶ್ರಮ ಹಾಗೂ ಪೌಷ್ಠಿಕ ಆಹಾರ ಸೇವನೆಯಿಂದ ದೇಹವನ್ನು ಸದೃಢವಾಗಿರಿಸಿಕೊಳ್ಳಬಹುದು. ಹಾಗೆಯೇ ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಕಸ ಮುಕ್ತ ಮಾಡಿ ಸ್ವಚ್ಛತೆ ಕಾಪಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿ ನೈರ್ಮಲ್ಯವನ್ನುಂಟು ಮಾಡದೆ ಸ್ವಚ್ಛತೆ ಕಾಪಾಡಿ ಗಾಂಧೀಜಿ ಕಂಡ ಕನಸಿನ ಸ್ವಚ್ಛ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ವಿ. ಹನುಮಂತಪ್ಪ ಮಾತನಾಡಿ, ನಾವು ವಾಸಿಸುವ ಮನೆ ಹಾಗೂ ಸುತ್ತ ಮುತ್ತಲಿನ ಪರಿಸರ ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ನಗರ ಪ್ರದೇಶಗಳ ಸ್ವಚ್ಛತೆಗೆ ಕಾರಣಕರ್ತರಾದ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ. ಪ್ರತಿಯೊಂದು ಕೆಲಸಕ್ಕೂ ತನ್ನದೇ ಆದ ಗೌರವವಿದೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ಸ್ವಚ್ಛತೆಗಾಗಿ ಮೀಸಲಿಟ್ಟಿರುವ ಪೌರ ಕಾರ್ಮಿಕರನ್ನು ಪ್ರತಿಯೊಬ್ಬರು ಗುರುತಿಸಿ ಗೌರವಿಸಬೇಕು. ಪರಿಸರವನ್ನು ಸ್ವಚ್ಛವಾಗಿರಿಸಿಕೊಂಡು ಆರೋಗ್ಯಯುತ ಜೀವನವನ್ನು ನಿರ್ವಹಿಸಿ ಎಂದರು.ವಕೀಲರ ಸಂಘದ ಅಧ್ಯಕ್ಷ ಡಿ.ಬಿ. ಸುಜೇಂದ್ರ ಮಾತನಾಡಿ, ನೈರ್ಮಲ್ಯವು ಅನಾರೋಗ್ಯಕ್ಕೆ ಮುಖ್ಯ ಕಾರಣ. ಆರೋಗ್ಯದ ಸಮಸ್ಯೆ ದೇಶದ ಜನರನ್ನು ಅಶಕ್ತರನ್ನಾಗಿ ಮಾಡಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಹಾಗೂ ಕಸವಿರದಂತೆ ಗಮನ ಹರಿಸಿ ಸ್ವಚ್ಛ ಪರಿಸರ ನಿರ್ಮಿಸಿಕೊಳ್ಳಬೇಕು. ತಮ್ಮ ಆರೋಗ್ಯ ಸುಸ್ಥಿತಿಯಲ್ಲಿರಿಸಿದಲ್ಲಿ ಸದೃಢ ದೇಹ ಮತ್ತು ಮನಸ್ಸನ್ನು ಹೊಂದಬಹುದು. ಪ್ರತಿಯೊಬ್ಬರು ಸ್ವಚ್ಛ ಭಾರತ ನಿರ್ಮಾಣದಲ್ಲಿ ಭಾಗಿಯಾಗಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್, ವಕೀಲ ಸಂಘದ ಉಪಾಧ್ಯಕ್ಷ ಶರತ್ಚಂದ್ರ, ವಕೀಲ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ಐ.ಎಸ್‌. ತೇಜಸ್ವಿ ಹಾಗೂ ನ್ಯಾಯಾಂಗ ಇಲಾಖೆ ಅಧಿಕಾರಿ ಸಿಬ್ಬಂದಿ, ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.

30 ಕೆಸಿಕೆಎಂ 2ಚಿಕ್ಕಮಗಳೂರಿನ ಕೋರ್ಟ್ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಜಿಲ್ಲಾ ಪ್ರಭಾರಿ ಪ್ರಧಾನ ಮತ್ತು ಸತ್ರ ನ್ಯಾಯಧೀಶೆ ಬಿ.ಸಿ. ಭಾನುಮತಿ ಚಾಲನೆ ನೀಡಿದರು. ನ್ಯಾ. ವಿ. ಹನುಮಂತಪ್ಪ ನ್ಯಾ. ಮಂಜುನಾಥ್‌, ಸುಜೇಂದ್ರ ಇದ್ದರು.