ಎಲ್ಲರೂ ಸಂವಿಧಾನದ ಮಹತ್ವ ತಿಳಿದುಕೊಳ್ಳಿ: ಶೈಲಶ್ರೀ

KannadaprabhaNewsNetwork | Updated : Feb 11 2024, 04:56 PM IST

ಸಾರಾಂಶ

ನಿರಂತರ ಶ್ರಮದಿಂದ ಭಾರತಕ್ಕೆ ಒಂದು ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟ ಕೀರ್ತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ನಿರಂತರ ಶ್ರಮದಿಂದ ಭಾರತಕ್ಕೆ ಒಂದು ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟ ಕೀರ್ತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಉಪನ್ಯಾಸಕಿ ಶೈಲಶ್ರೀ ಹೇಳಿದರು.

ತಾಲೂಕಿನ ಮಡ್ಲಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾವೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ನಮ್ಮ ದೇಶವನ್ನು ಆಳಿದ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಸಾಕಷ್ಟು ಜನ ಬೇಸತ್ತಿದ್ದರು. ಸ್ವಾತಂತ್ರ‍್ಯ ದೊರಕಿದ ನಂತರ ಈ ದೇಶದ ಆಡಳಿತವು ಸೂಸೂತ್ರವಾಗಿ ಸಾಗಲು ಒಂದು ಸದೃಢವಾದ ಸಂವಿಧಾನ ರಚನೆಯಾಗಬೇಕೆಂದು ತೀರ್ಮಾನಿಸಿ ಸಂವಿಧಾನ ರಚಿಸುವ ಜವಾಬ್ದಾರಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ವಹಿಸಲಾಗಿತ್ತು. 

ಸುಮಾರು ೩ ವರ್ಷಗಳ ಸತತ ಶ್ರಮದಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚಿಸಿ ಸಂವಿಧಾನ ಶಿಲ್ಪಿಯಾದರು. ಅವರು ರಚಿಸಿದ ಸಂವಿಧಾನದಲ್ಲಿ ಭಾರತದ ಎಲ್ಲ ನಾಗರಿಕರಿಗೆ ಸಮಾನವಾದ ಅವಕಾಶ ಕಲ್ಪಿಸಿದರು. ಅಂತಹ ಸಂವಿಧಾನದ ಮಹತ್ವವನ್ನು ಭಾರತೀಯರಾದ ನಾವು ತಿಳಿದುಕೊಳ್ಳಬೇಕು ಎಂದರು.

ತಾಪಂ ಮಾಜಿ ಸದಸ್ಯ ಈಶ್ವರಗೌಡ ಪಾಟೀಲ ಮಾತನಾಡಿ, ಸಂವಿಧಾನದ ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಇಂದು ಹಳ್ಳಿ ಹಳ್ಳಿಯಲ್ಲಿಯೂ ಸಂವಿಧಾನ ಜಾಗೃತಿ ಜಾಥಾದ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಕ್ಕಿರೇಶ ಕೊಂಡಾಯಿ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ ಮಾತನಾಡಿದರು.

ನಂತರ ಹುಲಸೋಗಿ, ಮಡ್ಲಿ, ಶ್ಯಾಡಂಬಿ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕವಿತಾ ಸೊಲಬಕ್ಕನವರ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ ಮುಖಂಡ ಚಂದ್ರಣ್ಣ ನಡುವಿನಮನಿ, ಗ್ರಾಪಂ ಸದಸ್ಯರಾದ ನಾಗಪ್ಪ ಸಿಂಧೆ, ಯಲ್ಲಪ್ಪ ತಗಡಿನಮನಿ, ಬಸವ್ವ ಗುಳೇದ, ಸೀತಮ್ಮ ಗಾಜುನವರ, ಗ್ರಾಪಂ ಮಾಜಿ ಸದಸ್ಯರಾದ ಧರ್ಮಣ್ಣ ಕಿವಡನವರ, ಮಲ್ಲಿಕಾರ್ಜುನ ಅಗಸರ ಹಾಗೂ ಮೂರು ಗ್ರಾಮಗಳ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರಿದ್ದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ ಸಂವಿಧಾನದ ಪೀಠಿಕೆ ಬೋಧಿಸಿದರು. ವೀರಭದ್ರೇಶ್ವರ ಜಾನಪದ ಕಲಾ ತಂಡದವರು ಸಂವಿಧಾನ ಪೀಠಿಕೆ ಗೀತೆ ಹಾಡಿದರು.

ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಂತೋಷ ಅಲಗೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರೇವಣಯ್ಯ ಹಿರೇಮಠ ಸ್ವಾಗತಿಸಿ, ಶಿವಕುಮಾರ ವಂದಿಸಿದರು. ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು.

Share this article