ಮುಂಡಗೋಡ: ಮಹಿಳಾ ರಕ್ಷಣಾ ಕಾಯ್ದೆ ಕಾನೂನಿನ ಬಗ್ಗೆ ಮಹಿಳೆಯರಿಗಿಂತ ಹೆಚ್ಚು ಪುರುಷರು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ ಯಾರೇ ತಪ್ಪು ಮಾಡಿದರೂ ಪುರುಷರಿಗೇ ಶಿಕ್ಷೆಯಾಗುತ್ತದೆ ಎಂದು ನ್ಯಾಯವಾದಿ ದೀಪ್ತಿ ಅಂಡಗಿ ತಿಳಿಸಿದರು.
ಭಾನುವಾರ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶ್ರೀ ಜ್ಞಾನೇಶ್ವರಿ ತಾಲೂಕು ದೈವಜ್ಞ ಮಹಿಳಾ ಮಂಡಳಿ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಏನಾದರೂ ಸಮಸ್ಯೆ ತಲೆದೋರಿದಾಗ ಅದನ್ನು ಸರಿಪಡಿಸಲು ಕೈಗೊಳ್ಳುವ ನಿಯಮವೇ ಕಾನೂನು. ಕಾನೂನು ದೊಡ್ಡ ಸಮುದ್ರವಿದ್ದಂತೆ. ಎಲ್ಲವನ್ನೂ ತಿಳಿದುಕೊಳ್ಳುವುದು ಕಷ್ಟವಾಗಬಹುದು. ಅದರಲ್ಲಿ ಅಗತ್ಯವಿರುವ ಕಾನೂನು ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಹೆಣ್ಣುಮಕ್ಕಳ ರಕ್ಷಣೆಗಾಗಿ ಸರ್ಕಾರ ಹಾಗೂ ನ್ಯಾಯಾಲಯ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೆ ತಂದಿವೆ. ಅಲ್ಲದೇ ೨೦೦೫ರಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಕೂಡ ಹೆಣ್ಣುಮಕ್ಕಳು ಸಮಾನ ಹಕ್ಕುದಾರರಾಗುತ್ತಾರೆ ಎಂಬ ಮಾಹಿತಿ ನೀಡಿದ ಅವರು, ನಿತ್ಯ ಸಮಾಜದಲ್ಲಿ ಅರಿವು ಮೂಡಿಸಿದರೂ ಫೋಕ್ಸೊ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನಿಯ. ಇದನ್ನು ತಡೆಯಬೇಕಾದರೆ ಪ್ರಮುಖವಾಗಿ ಮಕ್ಕಳಿಗೆ ಮೊಬೈಲ್ ನೀಡುವುದನ್ನು ತಡೆಯಬೇಕಲ್ಲದೇ ಮಕ್ಕಳ ಬಗ್ಗೆ ಫೋಷಕರು ಹೆಚ್ಚಿನ ಗಮನಹರಿಸಬೇಕು ಎಂದರು.ನಿವೃತ್ತ ಹಿರಿಯ ಶಿಕ್ಷಕಿ ಇಂದುಮತಿ ವೆರ್ಣೇಕರ ಅವರು, ತಾನೇ ದೊಡ್ಡವಳು ಎಂಬ ಭಾವನೆ ಯಾವ ಮಹಿಳೆಯಲ್ಲಿ ಕೂಡ ಬರಬಾರದು. ಮಹಿಳೆಯರು ಕುಟುಂಬಸ್ಥರ ವಿಶ್ವಾಸ, ಗೌರವ ಗಳಿಸುವುದರಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಹಾಗೂ ಮಕ್ಕಳು ಕೂಡ ಅವರನ್ನು ಗೌರವಿಸುತ್ತಾರೆ ಎಂದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಶಿಕ್ಷಕಿ ಸವಿತಾ ವೆರ್ಣೇಕರ ಮಾತನಾಡಿ, ಯಾವುದೇ ಒಂದು ಕುಟುಂಬಕ್ಕೆ ಮಹಿಳೆ ಆಧಾರಸ್ತಂಭವಿದ್ದಂತೆ. ಕುಟುಂಬದ ಏಳ್ಗೆ ಹಾಗೂ ನಾಶದಲ್ಲೂ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತಾರೆ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು.ದೈವಜ್ಞ ಸಮಾಜಸೇವಾ ಸಹಕಾರಿ ಸಂಘದ ಕಾರ್ಯದರ್ಶಿ ನಾಗೇಶ ರೇವಣಕರ ಮಾತನಾಡಿ, ಮಹಿಳೆ ಹಾಗೂ ಪುರುಷರ ನಡುವೆ ಯಾವುದೇ ವ್ಯತ್ಯಾಸ ಉಳಿದಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂದರು.
ಮಾಜಿ ಮಹಿಳಾ ಸಂಘದ ಅಧ್ಯಕ್ಷೆ ಹಾಗೂ ಹಿರಿಯರಾದ ಪ್ರೇಮಾ ವೆರ್ಣೇಕರ ಉದ್ಘಾಟಿಸಿ ಮಾತನಾಡಿ, ಹೆಣ್ಣುಮಕ್ಕಳು ಎಷ್ಟೇ ಉತ್ತುಂಗಕ್ಕೇರಿದರೂ ನಮ್ಮ ಸಂಸ್ಕಾರ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಎಂದಿಗೂ ಬಿಡಬಾರದು. ಸತ್ಯ ಧರ್ಮವನ್ನು ಪಾಲನೆ ಮಾಡುವುದು ಹೆಣ್ಣುಮಕ್ಕಳ ಪ್ರತಿಕವಾಗಿದೆ ಎಂದರು.ಮುಂಡಗೋಡ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಂಜುನಾಥ ವೆರ್ಣೇಕರ ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ೩೬೫ ದಿನಗಳ ಕಾಲ ಮಹಿಳಾ ಸಂಘಟನೆ ನಡೆಯಬೇಕು ಎಂದರು.
ಮಹಿಳಾ ಧುರೀಣರಾದ ರೇಖಾ ಅಂಡಗಿ ಮಾತನಾಡಿ, ಮಹಿಳೆಯವರು ಧೈರ್ಯದಿಂದ ಜೀವನ ಸಾಗಿಸಲು ಕಾನೂನು ಹಾಗೂ ಶಿಕ್ಷಣದೊಂದಿಗೆ ಆತ್ಮವಿಶ್ವಾಸ ಕೂಡ ಮಹಿಳೆಯರಿಗೆ ಮುಖ್ಯವಾಗಿರುತ್ತದೆ ಎಂದರು.ಶ್ರೀ ಜ್ಞಾನೇಶ್ವರಿ ತಾಲೂಕು ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ನಾಗರತ್ನ ದೈವಜ್ಞ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಮಹಿಳಾಧ್ಯಕ್ಷೆ ಪುಷ್ಪಾ ಶೇಟ್, ವೀಣಾ ರಾಯ್ಕರ, ಉಷಾ ರಾಯ್ಕರ, ದೈವಜ್ಞ ಯುವಕ ಮಂಡಳ ಅಧ್ಯಕ್ಷ ಮಂಜುನಾಥ ಶೇಟ್, ಅಣ್ಣಪ್ಪ ಶೇಟ್ ಮುಂತಾದವರು ಉಪಸ್ಥಿತರಿದ್ದರು.
ರೇಖಾ ವೆರ್ಣೇಕರ ಸ್ವಾಗತಿಸಿದರು. ಸ್ವಾತಿ ಜನ್ನು ನಿರೂಪಿಸಿದರು. ಮಂಜುಳಾ ಶೇಟ್ ವರದಿ ವಾಚಿಸಿದರು. ಮಂಜುಳಾ ಗಣಪತಿ ಶೇಟ್ ವಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರನ್ನು ಗೌರವಿಸಲಾಯಿತು.