ಕರ್ನಾಟಕ ಸಂಭ್ರಮದಲ್ಲಿ ಪಾಲ್ಗೊಂಡ ಕಲಾವಿದರಿಗೆ ಸಿಗದ ಸಂಭಾವನೆ

KannadaprabhaNewsNetwork | Published : Apr 8, 2024 1:07 AM

ಸಾರಾಂಶ

ಕರ್ನಾಟಕ ಎಂದು ಕನ್ನಡ ನಾಡಿಗೆ ನಾಮಕರಣ ಮಾಡಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿಯಲ್ಲಿ ಕನ್ನಡ ಜ್ಯೋತಿರಥ ಯಾತ್ರೆಯನ್ನು 2023ರ ನವೆಂಬರ್‌ 2ರಂದು ಆಯೋಜಿಸಲಾಗಿತ್ತು.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ: ಹಂಪಿ ಉತ್ಸವದಲ್ಲಿ ಭಾಗವಹಿಸಿದ ಕಲಾವಿದರಿಗೆ ಗೌರವ ಸಂಭಾವನೆ ಒದಗಿಸಿರುವ ಜಿಲ್ಲಾಡಳಿತ ಇದಕ್ಕೂ ಮುನ್ನ 2023ರ ನವೆಂಬರ್‌ನಲ್ಲಿ ನಡೆದ ಕರ್ನಾಟಕ ಸಂಭ್ರಮ-50 ನಿಮಿತ್ತ ಹಂಪಿಯಲ್ಲಿ ನಡೆದ ಕನ್ನಡ ಜ್ಯೋತಿರಥ ಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರಿಗೆ ಇದುವರೆಗೂ ಚಿಕ್ಕಾಸೂ ಸಂಭಾವನೆ ನೀಡಿಲ್ಲ.

ಕರ್ನಾಟಕ ಎಂದು ಕನ್ನಡ ನಾಡಿಗೆ ನಾಮಕರಣ ಮಾಡಿ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿಯಲ್ಲಿ ಕನ್ನಡ ಜ್ಯೋತಿರಥ ಯಾತ್ರೆಯನ್ನು 2023ರ ನವೆಂಬರ್‌ 2ರಂದು ಆಯೋಜಿಸಲಾಗಿತ್ತು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರಥಯಾತ್ರೆಗೆ ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕನ್ನಡದ ಹಿರಿಮೆ-ಗರಿಮೆ ಸಾರಿದ್ದು ಅಲ್ಲದೇ ತಮ್ಮ ತವರೂರಿನ ಸಿದ್ದರಾಮಯ್ಯನಹುಂಡಿ ಗ್ರಾಮದ ವೀರ ಮಕ್ಕಳ ಕುಣಿತದ ಕಲಾವಿದರೊಂದಿಗೆ ಹೆಜ್ಜೆ ಹಾಕಿದ್ದರು. ಆದರೆ, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಿದ್ದ ಸ್ಥಳೀಯ ಕಲಾವಿದರಿಗೆ ಇದುವರೆಗೆ ಕನ್ನಡ-ಸಂಸ್ಕೃತಿ ಇಲಾಖೆ ನಯಾಪೈಸೆ ನೀಡಿಲ್ಲ.

ಕಲಾವಿದರ ಅಲೆದಾಟ:

ಹಂಪಿ ಉತ್ಸವ ಫೆಬ್ರವರಿಯಲ್ಲಿ ಮೂರು ದಿನಗಳ ವರೆಗೆ ನಡೆದಿತ್ತು. ಉತ್ಸವದಲ್ಲಿ ಪಾಲ್ಗೊಂಡ ಕಲಾವಿದರಿಗೆ ಜಿಲ್ಲಾಡಳಿತ ಗೌರವ ಸಂಭಾವನೆ ಪಾವತಿಸಿದೆ. ಆದರೆ, ಇದಕ್ಕೂ ಮುನ್ನ ನಡೆದ ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಕಲಾವಿದರಿಗೆ ಸಂಭಾವನೆ ಬಿಡುಗಡೆಯಾಗಿಲ್ಲ. ಇದಕ್ಕಾಗಿ ಬಡ ಕಲಾವಿದರು ನಿತ್ಯ ಕನ್ನಡ-ಸಂಸ್ಕೃತಿ ಇಲಾಖೆಯ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುವಂತಾಗಿದೆ. ಕಲಾವಿದರು ಬಿಸಿಲನ್ನು ಲೆಕ್ಕಿಸದೇ ಪಾಲ್ಗೊಂಡಿದ್ದರೂ ಇದುವರೆಗೆ ಹಣ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

₹10 ಲಕ್ಷ ಸಂಭಾವನೆ:

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕಲಾವಿದರಿಗೆ ₹10 ಲಕ್ಷ ಕನ್ನಡ-ಸಂಸ್ಕೃತಿ ಇಲಾಖೆಯಿಂದ ಬಿಡುಗಡೆಯಾಗಬೇಕಿದೆ. ಈ ಕುರಿತು ಕಡತವನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಆದರೂ ಇದುವರೆಗೆ ಹಣ ಬಿಡುಗಡೆಯಾಗಿಲ್ಲ. ಊಟೋಪಚಾರ ಸೇರಿ ಇತರ ವೆಚ್ಚಕ್ಕಾಗಿ ₹19 ಲಕ್ಷ ಖರ್ಚಾಗಿದೆ. ₹29 ಲಕ್ಷ ಕನ್ನಡ-ಸಂಸ್ಕೃತಿ ಇಲಾಖೆ ಕೇಂದ್ರ ಕಚೇರಿಯಿಂದ ಬಿಡುಗಡೆಯಾಗಿಲ್ಲ.

ಹಂಪಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ 50ಕ್ಕೂ ಅಧಿಕ ಕಲಾತಂಡಗಳು ಭಾಗವಹಿಸಿ ವಿಜಯನಗರ ಸಾಮ್ರಾಜ್ಯದ ಗತವೈಭವ ಹಾಗೂ ನಾಡಿನ ಶ್ರೀಮಂತ ಕಲಾ ಸಂಸ್ಕೃತಿ ಅನಾವರಣಗೊಳಿಸಿದ್ದವು. ಆದರೆ, ಐದು ತಿಂಗಳು ಕಳೆದರೂ ಇದುವರೆಗೆ ಕಲಾವಿದರಿಗೆ ಹಣ ಬಿಡುಗಡೆ ಮಾಡಿಲ್ಲ. ಗೌರವ ಸಂಭಾವನೆಗಾಗಿ ಬಡ ಕಲಾವಿದರು ಪರದಾಡುವಂತಾಗಿದೆ. ಈ ಸಮಸ್ಯೆ ಬಗೆಹರಿಸಬೇಕು ಎಂದು ಕಲಾವಿದರು ಒತ್ತಾಯಿಸಿದ್ದಾರೆ.

ಕರ್ನಾಟಕ ಸಂಭ್ರಮ-50 ಕಾರ್ಯಕ್ರಮದಲ್ಲಿ ಹಂಪಿಯಲ್ಲಿ ಭಾಗವಹಿಸಿದ ಸ್ಥಳೀಯ ಕಲಾವಿದರಿಗೆ ಹಾಗೂ ಕಲಾ ತಂಡಗಳಿಗೆ ಸಂಭಾವನೆ ನೀಡಿಲ್ಲ. ಕಲಾವಿದರು ಹೊಟ್ಟೆಪಾಡಿಗಾಗಿ ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಏನೋ ಅಲ್ಪ ಸ್ವಲ್ಪ ಬರುವ ಸಂಭಾವನೆಯಿಂದ ಜೀವನೋಪಾಯ ಕಂಡುಕೊಳ್ಳುತ್ತಿದ್ದರು. ಆದರೆ ಇಲ್ಲಿವರೆಗೆ ಸಾಕಷ್ಟು ಬಾರಿ ಇಲಾಖೆ ಕಚೇರಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಬಡ ಕಲಾವಿದರಿಗೆ ಸಂಭಾವನೆ ಬಿಡುಗಡೆಗೊಳಿಸಬೇಕು ಎನ್ನುತ್ತಾರೆ ಸಿದ್ಧರಾಮೇಶ್ವರ ಕಲಾ ಸಾಂಸ್ಕೃತಿಕ ಸಂಘ ಅಧ್ಯಕ್ಷ ವಿರೂಪಾಕ್ಷಿ ವಿ.

ಕರ್ನಾಟಕ ಸಂಭ್ರಮ 50 ಕಾರ್ಯಕ್ರಮದ ಕಲಾವಿದರ ಸಂಭಾವನೆ ಕುರಿತು ಕಡತವನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಇನ್ನು ಹಣ ಬಿಡುಗೆಯಾಗಿಲ್ಲ. ನೀತಿಸಂಹಿತೆ ಜಾರಿಯಾಗಿದೆ. ಹಣ ಬಂದ ಕೂಡಲೇ ಕಲಾವಿದರಿಗೆ ಗೌರವ ಸಂಭಾವನೆ ನೀಡಲಾಗುವುದು ಎನ್ನುತ್ತಾರೆ ಕನ್ನಡ-ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ್‌.

Share this article