ಪ್ರತಿಯೊಬ್ಬರು ದ್ವೇಷ, ಅಸೂಯೆ ಬಿಟ್ಟು ಬದುಕಬೇಕು: ನಂಜಾವಧೂತ ಶ್ರೀಗಳು

KannadaprabhaNewsNetwork |  
Published : Jun 13, 2025, 03:40 AM IST
10ಕೆಎಂಎನ್ ಡಿ17 | Kannada Prabha

ಸಾರಾಂಶ

ಮನುಷ್ಯನಿಗೆ ಮೊದಲು ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ, ನಿಷ್ಠೆ, ಪ್ರಾಮಾಣಿಕತೆ ಇಲ್ಲದಿದ್ದರೆ ಎಷ್ಟು ದೊಡ್ಡ ದೇವಾಲಯ ಕಟ್ಟಿದರೂ ವ್ಯರ್ಥವಾಗುತ್ತದೆ. ಸಂಪನ್ಮೂಲಗಳನ್ನು ಕ್ರೋಡೀಕರಿಸಿ ದೇವಾಲಯ ಕಟ್ಟುವುದು ದೊಡ್ಡ ವಿಚಾರವಲ್ಲ. ಸಂಸ್ಕಾರದಿಂದ ಬದುಕುವುದು ಮುಖ್ಯ.

ಕನ್ನಡಪ್ರಭ ವಾರ್ತೆ ಮದ್ದೂರು

ಪ್ರತಿಯೊಬ್ಬ ಮನುಷ್ಯ ದ್ವೇಷ, ಅಸೂಯೆ, ಸ್ವಾರ್ಥ ಬಿಟ್ಟು ಬದುಕಿದಾಗ ಮಾತ್ರ ಸಮಾಜ ಸುಭೀಕ್ಷೆಯಿಂದ ಇರಲು ಸಾಧ್ಯ ಎಂದು ಸ್ಪಟಿಕಪುರಿ ಮಹಾಸಂಸ್ಥಾನಮಠದ ಪೀಠಾಧಿಪತಿ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲೂಕಿನ ಮಾದನಾಯಕನಹಳ್ಳಿ ಶ್ರೀಸಿದ್ಧರಾಮೇಶ್ವರಸ್ವಾಮಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಳಶೋತ್ಸವದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಭೂಮಿ ಮೇಲೆ ಮನುಷ್ಯನಾಗಲಿ ಅಥವಾ ಯಾವುದೇ ಜೀವಿಯಾಗಲಿ ಶಾಶ್ವತವಲ್ಲ. ಇರುವಷ್ಟು ದಿನ ಎಲ್ಲರೊಂದಿಗೂ ಸಂತೋಷದಿಂದ ಸಾರ್ಥಕ ಬದುಕು ನಡೆಸುವುದೇ ಪರಮೋಚ್ಛ ಕೆಲಸ ಎಂದರು.

ಮನುಷ್ಯನಿಗೆ ಮೊದಲು ತನ್ನ ಮೇಲೆ ತನಗೆ ನಂಬಿಕೆ ಇರಬೇಕು. ನಾವು ಮಾಡುವ ಕೆಲಸದಲ್ಲಿ ನಂಬಿಕೆ, ನಿಷ್ಠೆ, ಪ್ರಾಮಾಣಿಕತೆ ಇಲ್ಲದಿದ್ದರೆ ಎಷ್ಟು ದೊಡ್ಡ ದೇವಾಲಯ ಕಟ್ಟಿದರೂ ವ್ಯರ್ಥವಾಗುತ್ತದೆ. ಸಂಪನ್ಮೂಲಗಳನ್ನು ಕ್ರೋಡೀಕರಿಸಿ ದೇವಾಲಯ ಕಟ್ಟುವುದು ದೊಡ್ಡ ವಿಚಾರವಲ್ಲ. ಸಂಸ್ಕಾರದಿಂದ ಬದುಕುವುದು ಮುಖ್ಯ ಎಂದರು.

ಜನತೆ ಸನ್ಮಾರ್ಗಗಳಲ್ಲಿ ನಡೆಯಬೇಕು. ತನ್ನ ಸುತ್ತಮುತ್ತಲಿನ ಜನ ಹಾಗೂ ಪರಿಸರವನ್ನು ಸಂತೋಷವಾಗಿಡಲು ಸಕಲರೂ ಪ್ರಯತ್ನಿಸಬೇಕು. ಅದು ಬಿಟ್ಟು ದ್ವೇಷ, ಅಸೂಯೆ ಅಥವಾ ಸ್ವಾರ್ಥ ಬದುಕು ಸಲ್ಲದು. ಸದ್ವಿಚಾರಗಳು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯುತ್ತದೆ ಎಂದರು.

ಸಾವಿರಾರು ವರ್ಷಗಳ ಹಿನ್ನೆಲೆಯಿರುವ ಶ್ರೀಸಿದ್ಧರಾಮೇಶ್ವರ ದೇವಸ್ಥಾನವನ್ನು ಶ್ರೀಪಟ್ಟಲದಮ್ಮ ಟ್ರಸ್ಟ್‌ನ ಪದಾಧಿಕಾರಿಗಳು ಅತ್ಯಂತ ಸುಂದರವಾಗಿ ನಿರ್ಮಿಸಿ, ಪುನರ್ ಪ್ರತಿಷ್ಠೆ ಮಾಡುತ್ತಿರುವುದು ಮಹತ್ವದ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳನ್ನು ನಿರ್ಮಿಸಿ ಭಕ್ತಿಯಿಂದ ದೇವರನ್ನು ಪೂಜಿಸಿದರೆ ಇಷ್ಟಾರ್ಥ ದೊರೆಯುತ್ತದೆ. ದೇವರಲ್ಲಿ ಆಧ್ಯಾತ್ಮಿಕತೆ ಬರಲು ದೇವಸ್ಥಾನಗಳು ಮೂಲ ಕೇಂದ್ರಗಳಾಗಿವೆ. ಜತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಧರ್ಮ, ಆಚಾರ- ವಿಚಾರಗಳನ್ನು ಜನತೆ ಮೈಗೂಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮಂಡ್ಯ ಜಿಲ್ಲೆ ಸೇರಿದಂತೆ ಮದ್ದೂರು ತಾಲೂಕು ನನ್ನ ತಂದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮರುಜನ್ಮ ನೀಡಿದೆ. ಇಂದು ಅವರು ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವುದಕ್ಕೆ ನಿಮ್ಮ ಆಶೀರ್ವಾದವೇ ಕಾರಣ. ಅವರು ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಋಣ ತೀರಿಸುವುದಕ್ಕೆ ದೊಡ್ಡ ಕೈಗಾರಿಕೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸುವ ಗುರಿ ಹೊಂದಿದ್ದಾರೆ ಎಂದರು.

ಪಟ್ಟಲದಮ್ಮದೇವಿ ಟ್ರಸ್ಟ್ ಅಧ್ಯಕ್ಷ ಮಾದನಾಯಕನಹಳ್ಳಿ ಕೆ.ರಾಜಣ್ಣ ಮಾತನಾಡಿದರು.

ಇದೇ ವೇಳೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ದೇವರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ದೇಗುಲದಲ್ಲಿ ಬೆಳಗ್ಗೆ ಬ್ರಹ್ಮ ಕಲಶಾಭಿಷೇಕ, ಶಿಖರ ಕಲಾಭಿಷೇಕ, ಪ್ರಸನ್ನ ಪೂಜೆ, ಮಂತ್ರಾಕ್ಷತೆ, ಮಹಾಮಂಗಳಾರತಿ, ಮಧ್ಯಾಹ್ನ ಸಹಸ್ರಾರು ಭಕ್ತಾದಿಗಳಿಗೆ ರಾಗಿ ಮುದ್ದೆ, ಅವರೇಕಾಳು ಕೂಟು, ಒಬ್ಬಟ್ಟು, ಪಾಯಸ, ಅನ್ನ ಸಾಂಬಾರು, ಮಜ್ಜಿಗೆ ಊಟವನ್ನು ಉಡಬಡಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಟ್ರಸ್ಟ್ ಕಾರ್ಯದರ್ಶಿ ಪ್ರೊ.ಮಲ್ಲಯ್ಯ, ಖಜಾಂಚಿ ಗಿರೀಶ್, ಪ್ರಧಾನ ಅರ್ಚಕ ಸೂರ್ಯನಾರಾಯಣ ದಿಕ್ಷೀತ್, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಉದ್ಯಮಿ ಸುಬ್ರಹ್ಮಣ್ಯ ನಾಯ್ದು, ಮುಖಂಡರಾದ ಡಿ.ಟಿ.ಸಂತೋಷ್, ಮಹರ್ನವಮಿದೊಡ್ಡಿ ಚಂದ್ರಣ್ಣ, ಕೂಳಗೆರೆ ಶೇಖರ್, ದೇವರಾಜು, ನಾಗರಾಜು, ಶಶಿಕಲಾ ಹೊನ್ನೇಗೌಡ, ಬಿಳಿಮರಿಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ