ಒಳ ಮೀಸಲಾತಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಿ: ಶಾಸಕ ದರ್ಶನ್ ಧ್ರುವನಾರಾಯಣ್

KannadaprabhaNewsNetwork | Published : May 20, 2025 1:01 AM
ಮೂಲ ಜಾತಿಯಲ್ಲಿ ನಾವು ಹೊಲಯ ಎನ್ನುವುದನ್ನು ನಮೂದಿಸಬೇಕು. ಹಲವು ದಿನಗಳಿಂದ ಸಹಜವಾಗಿ ಇರುವ ಗೊಂದಲವನ್ನು ಬಗೆಹರಿಸಲಾಗಿದೆ. ನಮ್ಮ ಸಂಖ್ಯೆಯನ್ನು ನಾವು ಖಚಿತಪಡಿಸಿಕೊಳ್ಳಬೇಕು. ಮೀಸಲಾತಿ ಮತ್ತು ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಸಮಾಜದ ಜನಸಂಖ್ಯೆಯನ್ನು ದಾಖಲಿಸಬೇಕು.
Follow Us

ಕನ್ನಡಪ್ರಭ ವಾರ್ತೆ ಮೈಸೂರು

ಪರಿಶಿಷ್ಟಜಾತಿ ಸಮುದಾಯದಲ್ಲಿ ಒಳ ಮೀಸಲಾತಿ ನೀಡಲು ನಡೆಯುತ್ತಿರುವ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.

ನಗರದ ಅಶೋಕ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧವಿಹಾರದ ಆವರಣದಲ್ಲಿ ಸೋಮವಾರ ನಡೆದ ದಲಿತ ಬಲಗೈ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ವರದಿಯ ಶಿಫಾರಸಿನಂತೆ ವೈಜ್ಞಾನಿಕವಾಗಿ ಜನಸಂಖ್ಯೆಯನ್ನು ಗುರುತಿಸಲು ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಉಳಿದಿರುವ ಸಮಯದಲ್ಲಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮಾಡಬೇಕಿದೆ ಎಂದರು.

ಮೂಲ ಜಾತಿಯಲ್ಲಿ ನಾವು ಹೊಲಯ ಎನ್ನುವುದನ್ನು ನಮೂದಿಸಬೇಕು. ಹಲವು ದಿನಗಳಿಂದ ಸಹಜವಾಗಿ ಇರುವ ಗೊಂದಲವನ್ನು ಬಗೆಹರಿಸಲಾಗಿದೆ. ನಮ್ಮ ಸಂಖ್ಯೆಯನ್ನು ನಾವು ಖಚಿತಪಡಿಸಿಕೊಳ್ಳಬೇಕು. ಮೀಸಲಾತಿ ಮತ್ತು ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕಾದರೆ ಸಮಾಜದ ಜನಸಂಖ್ಯೆಯನ್ನು ದಾಖಲಿಸಬೇಕು ಎಂದರು.

ಆರ್ಥಿಕ ಸಮೀಕ್ಷೆ ಕೈಬಿಡಿ:

ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್. ಭಾಸ್ಕರ್ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಸಮೀಕ್ಷೆ ನಡೆಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಯಾಕೇ ಆರ್ಥಿಕ ಸಮೀಕ್ಷೆ ಮಾಡಲಾಗುತ್ತಿದೆ. ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಹೊಲೆಯ, ಮಾದಿಗ ಜನರ ಸಂಖ್ಯೆ ತಿಳಿಯುವ ನೆಪದಲ್ಲಿ ಕೇಂದ್ರ ಸರ್ಕಾರ ಕೆನೆಪದರ ಜಾರಿಯ ಹುನ್ನಾರ ನಡೆಸಿದೆ. ಕೇಂದ್ರ ಸರ್ಕಾರದ ಅಣತಿಯಂತೆ ಅಧಿಕಾರಿಗಳು ಆರ್ಥಿಕ ಸಮೀಕ್ಷೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯ ಸಂಖ್ಯೆ ತಿಳಿಯಲು ತಹಸೀಲ್ದಾರ್ ಅವರು ನೀಡುವ ಜಾತಿ ಪ್ರಮಾಣ ಪತ್ರದ ಸಂಖ್ಯೆಯನ್ನು ಆಧಾರವಾಗಿ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಆಲೋಚಿಸಬೇಕು. ಕೂಡಲೇ ಆರ್ಥಿಕ ಸಮೀಕ್ಷೆಯನ್ನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಮೇಯರ್ ಪುರುಷೋತ್ತಮ್, ಲೇಖಕ ಸಿದ್ಧಸ್ವಾಮಿ, ಮುಖಂಡರಾದ ಎನ್. ಭಾಸ್ಕರ್, ಲಕ್ಷ್ಮೀನಾರಾಯಣ, ವಿಶ್ವ, ಜೋಗಿ ಮಹೇಶ, ಉದಯಕುಮಾರ್, ಎಂ.ಉಮೇಶ, ಎಸ್. ರಾಜೇಶ, ತುಂಬಲ ರಾಮಣ್ಣ, ಸಿದ್ದಸ್ವಾಮಿ, ಕಾಂತರಾಜ, ತಿಮ್ಮಯ್ಯ, ಗೋವಿಂದರಾಜು, ಶ್ರೀಧರ್, ರಾಮಸ್ವಾಮಿ, ಬಬಿತಾ, ಮಹೇಶ್ ಇರಸವಾಡಿ ಮೊದಲಾದವರು ಇದ್ದರು.ಒಳ ಮೀಸಲಾತಿ ಸಮೀಕ್ಷೆ ನಡೆಸುತ್ತಿರುವುದರಿಂದ ಇದು ನಮ್ಮ ಅಸ್ತಿತ್ವ. ಕೆಲವರಿಗೆ ಸ್ವಲ್ಪ ಕೀಳಿರಿಮೆ ಇದೆ. ಬಾಡಿಗೆ ಮನೆಯಲ್ಲಿ ಮತ್ತು ಪ್ರತಿಷ್ಠಿತ ಬಡಾವಣೆಗಳಲ್ಲಿ ನೆಲೆಸಿರುವವರು ಜಾತಿ ಹೇಳಲು ಹಿಂದೇಟು ಹಾಕುತ್ತಿದ್ದಾರೆ. ನಾನು ಹೊಲಯ ಎನ್ನುವುದನ್ನು ಹೇಳಲು ಹಿಂಜರಿಯಬಾರದು. ಡಾ. ಅಂಬೇಡ್ಕರ್ ಕೊಟ್ಟ ಮೀಸಲಾತಿ ಪಡೆಯುತ್ತಿರುವ ನಾವೆಲ್ಲರೂ ಜಾತಿ ಹೆಸರೇಳಲು ಯಾಕೇ ಭಯ ಪಡಬೇಕು?

- ಪುರುಷೋತ್ತಮ್, ಮಾಜಿ ಮೇಯರ್