ಮಾತೃಭಾಷೆಯನ್ನು ಎಲ್ಲರೂ ಗೌರವದಿಂದ ಕಾಣಿ: ಬಿ.ಎನ್. ವಾಸರೆ

KannadaprabhaNewsNetwork | Published : Jun 28, 2024 12:45 AM

ಸಾರಾಂಶ

ನಾಡಭಾಷೆಯನ್ನು ಪ್ರತಿಯೊಬ್ಬರೂ ತಾಯಿಯಂತೆ ಗೌರವಿಸಬೇಕು. ಕನ್ನಡದ ಸಾಧನೆಗೆ ಮನೆ ಭಾಷೆಯು ಎಂದಿಗೂ ಅಡ್ಡಿಯಾಗದು. ನಾವು ಎಷ್ಟೇ ಎತ್ತರಕ್ಕೇರಿದರೂ ಮಾತೃಭಾಷೆಯ ಬಗ್ಗೆ ಅಭಿಮಾನವಿರಬೇಕು.

ಹಳಿಯಾಳ: ಕನ್ನಡದ ಕಾಳುಗಳು ಮಕ್ಕಳ ಹೃದಯದಲ್ಲಿ ಬಿತ್ತಿದಾಗ ಅವು ಮುಂದೊಂದು ದಿನ ಕನ್ನಡದ ಕಲ್ಪವೃಕ್ಷವಾಗಿ ಬೆಳೆಯುತ್ತವೆ. ಕನ್ನಡ ಭಾಷಾ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಅಂತಹ ಕೆಲಸವನ್ನು ಮಾಡುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದರು.

ಬುಧವಾರ ಸಂಜೆ ಪಟ್ಟಣದ ಸರ್ಕಾರಿ ಶಿವಾಜಿ ಪ್ರೌಢಶಾಲೆಯಲ್ಲಿ ಜಿಲ್ಲಾ ಕಸಾಪ ಘಟಕ ಹಾಗೂ ಹಳಿಯಾಳ ತಾಲೂಕು ಕಸಾಪ ಘಟಕದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ 2023- 24ನೇ ಸಾಲಿನ ಎಸ್ಎಸ್ಎಲ್‌ಸಿಯಲ್ಲಿ ಕನ್ನಡಕ್ಕೆ ಪ್ರತಿಶತಃ ನೂರರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಡಭಾಷೆಯನ್ನು ಪ್ರತಿಯೊಬ್ಬರೂ ತಾಯಿಯಂತೆ ಗೌರವಿಸಬೇಕು. ಕನ್ನಡದ ಸಾಧನೆಗೆ ಮನೆ ಭಾಷೆಯು ಎಂದಿಗೂ ಅಡ್ಡಿಯಾಗದು. ನಾವು ಎಷ್ಟೇ ಎತ್ತರಕ್ಕೇರಿದರೂ ಮಾತೃಭಾಷೆಯ ಬಗ್ಗೆ ಅಭಿಮಾನವಿರಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎಸ್‌ಎಸ್‌ಎಲ್‌ಸಿ ನೋಡೆಲ್ ಅಧಿಕಾರಿ ಜೇಮ್ಸ್ ಡಿಸೋಜಾ ಮಾತನಾಡಿ, ಸಾಹಿತ್ಯ ಸಂರಕ್ಷಣೆಯಲ್ಲಿ ಮಕ್ಕಳು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳ ಸ್ಫೂರ್ತಿಗೆ ಈ ಕಾರ್ಯಕ್ರಮವು ಸಾರ್ಥಕವಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ್ ಭಾವಿಕೇರಿ ಹಾಗೂ ಕಸಾಪ ಜಿಲ್ಲಾಧಿಕಾರಿ ಸಿದ್ದಪ್ಪ ಬಿರಾದಾರ ಅವರು ಮಾತನಾಡಿದರು.

ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎನ್. ಅರಶಿಣಗೇರಿ, ಶಿವಾಜಿ ಪ್ರೌಢಶಾಲೆಯ ಮುಖ್ಯೋಧ್ಯಾಪಕ ಅಮೀನ ಮಮದಾಪುರ, ಸಾಹಿತಿ ಸುರೇಶ ಕಡೆಮನಿ, ತಾಲೂಕು ಕಸಾಪ ಪದಾಧಿಕಾರಿ ಜಿ.ಡಿ. ಗಂಗಾಧರ, ಬಸವರಾಜ ಇಟಗಿ, ವಿಠ್ಠಲ, ಗೋಪಾಲ್ ಮೇತ್ರಿ ಇದ್ದರು.

ಮಿಲಾಗ್ರಿಸ್ ಶಾಲೆಯ ಮಕ್ಕಳು ನಾಡಗೀತೆಯನ್ನು, ಶಿಕ್ಷಕಿ ಸುಮಾ ಹಡಪದ ಪ್ರಾರ್ಥನಾ ಗೀತೆಯನ್ನು ಹಾಡಿದರು. ಶಿಕ್ಷಣ ಇಲಾಖೆಯ ಸಿಆರ್‌ಪಿ ಗೋಪಾಲ ಅರಿ ಹಾಗೂ ಉಪನ್ಯಾಸಕ ಶಾಂತಾರಾಮ ಚಿಬುಲಕರ ಕಾರ್ಯಕ್ರಮ ನಿರ್ವಹಿಸಿದರು.

Share this article