ಮರಿಯಮ್ಮನಹಳ್ಳಿ: ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮಹಿಳೆಯರನ್ನು ಗೌರವಿಸಬೇಕು ಎಂದು ಶಾಸಕಿ ಈ.ಅನ್ನಪೂರ್ಣ ತುಕಾರಾಂ ಹೇಳಿದರು.
ಈ ಒಪ್ಪತ್ತೇಶ್ವರ ಮಠದಲ್ಲಿ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಸೌಭಾಗ್ಯ. ಇಂತಹ ಪುಣ್ಯ ಸ್ಥಳದಲ್ಲಿ ನಾನು ಉಡಿ ತುಂಬಿಸಿಕೊಳ್ಳುವುದು ತವರು ಮನೆಯಲ್ಲಿ ಉಡಿ ತುಂಬಿಸಿದಕ್ಕಿಂತ ಹೆಚ್ಚು ಸಂತೋಷ ತಂದಿದೆ ಎಂದರು.
ಮಠಮಾನ್ಯಗಳು ಬೆಳೆಯಬೇಕೆಂದರೆ ಕೇವಲ ಸ್ವಾಮೀಜಿಯಿಂದ ಮಾತ್ರ ಸಾಧ್ಯವಿಲ್ಲ. ಭಕ್ತರಿಂದಲೂ ಮಠ ಬೆಳೆಯಬೇಕು. ಉಡಿ ತುಂಬಿಸಿಕೊಳ್ಳುವುದಕ್ಕೆ ಬಂದ ನಿಮ್ಮೆಲ್ಲರ ಕುಟುಂಬದಲ್ಲಿ ಸುಖ ಶಾಂತಿ ಸಮೃದ್ದಿಯಾಗಲಿ. ನಾನು ಈ ಮಠದ ಮಗಳು ಯಾವಾಗಲೂ ನಾನು ಈ ಮಠದ ಸೇವೆಗೆ ಸದಾಸಿದ್ಧ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಒಪ್ಪತ್ತೇಶ್ವರ ಮಹಾಸ್ವಾಮಿಯ ಪೀಠಾಧಿಪತಿ ನಿರಂಜನ ಪ್ರಭು ಶ್ರೀ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಎಲ್ಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಹೆಣ್ಣು ಅಂದರೆ ದೇವತಾ ಸ್ವರೂಪಿಣಿ. ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನಮಾನವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೂಲಗಿತ್ತಿಯರಾದ ಡಿ.ಹಂಪಮ್ಮ, ಎಸ್.ಎನ್. ಗೌರಮ್ಮ, ಎಂ.ಕಾಳಮ್ಮ ಅವರನ್ನು ಸನ್ಮಾನಿಸಲಾಯಿತು. 2025-26ನೇ ಸಾಲಿನ ಶೇ.85 ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಥಳೀಯ ಕಲಾವಿದರಿಂದ ಸುಗಮ ಸಂಗೀತ, ಭರತನಾಟ್ಯ ಕಾರ್ಯಕ್ರಮಗಳು ನಡೆದವು.