ಸಂಸ್ಕಾರೋತ್ಸವ ಕಾರ್ಯಕ್ರಮ ಸಮಾರೋಪ ಸಮಾರಂಭ
ಹವ್ಯಕ ಸಮಾಜದಲ್ಲಿ ಇಂದು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಅಂಶ ಎಂದರೆ ಮೂರು ''ಸ''ಕಾರಗಳು. ಸಂಸ್ಕಾರ, ಜನಸಂಖ್ಯೆ, ಸಂಘಟನೆ. ಜನಸಂಖ್ಯೆಯಿಂದು ತೀವ್ರ ಕುಸಿಯುತ್ತಿದೆ. ಹೆಣ್ಣುಮಕ್ಕಳಿಗೆ ಸೂಕ್ತ ಸಮಯದಲ್ಲಿ ವಿವಾಹ ಮಾಡಬೇಕು. ಸಮಾಜವನ್ನು ಸುಸಂಸ್ಕೃತವಾಗಿ ಇಟ್ಟುಕೊಳ್ಳಲು ಪ್ರತಿಯೊಬ್ಬರೂ ಮನೆಯಿಂದಲೇ ಸಂಸ್ಕೃತಿಯನ್ನು ಪ್ರಾರಂಭಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.
ಭಾನುವಾರ ಸಂಜೆ ಕಾರ್ಮಿಕ ಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭೆ, ಯಲ್ಲಾಪುರ ತಾಲೂಕಾ ಹವ್ಯಕ ಸಂಘ, ಅಂಕೋಲಾ ಹವ್ಯಕ ಸಾಂಸ್ಕೃತಿಕ ಸಂಘ, ಗುಂದ ಹವ್ಯಕ ಬಳಗ ಸಂಯುಕ್ತವಾಗಿ ಹಮ್ಮಿಕೊಂಡ ಸಂಸ್ಕಾರೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ, ಪ್ರತಿಬಿಂಬ ಬಹುಮಾನ ವಿತರಿಸಿ, ಆಶೀರ್ವಚನ ನೀಡಿದರು.ದೇಶಾದ್ಯಂತ ಅನೇಕ ಸಂದರ್ಭಗಳಲ್ಲಿ ಬ್ರಾಹ್ಮಣರ ನಿಂದನೆ, ತೇಜೋವಧೆ ಮಾಡಲಾಗುತ್ತಿದೆ. ನಾವು ಸಂಘಟಿತರಾಗಬೇಕಾಗಿದೆ. ಜನಿವಾರ ಕತ್ತರಿಸಿದರೂ ಸಂಸ್ಕಾರವನ್ನು ನಾಶ ಮಾಡಲಾಗದು. ಬೇರೊಂದು ಜನಿವಾರ ಹಾಕುವುದಕ್ಕೆ ಅವಕಾಶವಿದೆ. ಹಾಗಂತ ಜನಿವಾರ ಕೇವಲ ಬ್ರಾಹ್ಮಣರಿಗೊಂದೇ ಸೀಮಿತವಲ್ಲ. ಕ್ಷತ್ರಿಯರು, ವೈಶ್ಯರು ಸೇರಿದಂತೆ ಅನೇಕ ಸಮಾಜದಲ್ಲಿ ಜನಿವಾರ ಧರಿಸುವ ಪರಂಪರೆಯಿದೆ. ಉಚ್ಛ ಪರಂಪರೆಯಿಂದ ಬಂದ ಒಂದು ಕುಟುಂಬ ವ್ಯವಸ್ಥೆಯನ್ನು ನಾವು ಸಾಗಿ ಬಂದಿದ್ದೇವೆ. ಜೀವಮಾನದಲ್ಲಿ ಯಾವೆಲ್ಲ ಸಂಸ್ಕಾರಗಳನ್ನು ಮಾಡುತ್ತೇವೆಯೋ ಮರಣಾನಂತರ ಮಾಡುವ ಸಂಸ್ಕಾರಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ನಮ್ಮ ಹವ್ಯಕ ಅನೇಕ ಮಾತೆಯರು ಹುಟ್ಟಿನಿಂದ ಸಾಯುವವರೆಗಿನ ಹಾಡುಗಳನ್ನು ಹೇಳುತ್ತಿದ್ದರು. ಅದು ಮುಂದಿನ ಜನಾಂಗಕ್ಕೆ ಸಿಗದು. ಅದನ್ನು ಮಹಾಸಭೆ ಸಂಗ್ರಹ ಮಾಡಬೇಕು. ಆ ದೃಷ್ಟಿಯಿಂದ ನಮ್ಮ ಜಿಲ್ಲೆಯಲ್ಲಿ ಹವ್ಯಕ ಸಮುದಾಯಕ್ಕೆ ರಾಜಕೀಯ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಶಕ್ತಿಯಿದೆ. ಆದರೂ ಎಲ್ಲರಿಗೂ ನಾವು ನಮ್ಮವರೆಂಬ ಭಾವನೆ ಇರಬೇಕು. ಆದರೆ ಉಳಿದ ಸಮಾಜದವರಂತೆ ನಮ್ಮವರ ಸಾಧನೆಗೆ ಉತ್ತಮ ಕಾರ್ಯವನ್ನು ಬೆಂಬಲಿಸುವ ಕೊರತೆ ಕಾಣುತ್ತಿದೆ. ಅದು ಇಂತಹ ಸಂಘಟನೆಗಳ ಮೂಲಕ ಬೆಳೆಯುವಂತಾಗಬೇಕು ಎಂದರು.
ಮಹಾಭೆಯ ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರ, ನಿರ್ದೇಶಕರಾದ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಪ್ರಶಾಂತ ಹೆಗಡೆ ಉಪಸ್ಥಿತರಿದ್ದರು. ಗುರುಪ್ರಸಾದ ಸಂಗಡಿಗರು ವೇದಘೋಷ ಪಠಿಸಿದರು. ಸಮೃದ್ಧಿ ಭಾಗ್ವತ ಪ್ರಾರ್ಥಿಸಿದರು. ಮಹಾಸಭೆಯ ಕಾರ್ಯದರ್ಶಿ ಪ್ರಶಾಂತ ಭಟ್ಟ ಮಲವಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಶ್ರೀಧರ ಭಟ್ಟ, ಮಹಾದೇವಿ ಭಟ್ಟ ನಿರ್ವಹಿಸಿದರು. ಸಂಸ್ಕಾರೋತ್ಸವದ ಸಂಚಾಲಕ ಸಣ್ಣಪ್ಪ ಭಾಗ್ವತ ವಂದಿಸಿದರು.ವಿಷಯ ಮಂಡನೆ