ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಸಹಕಾರ ಕ್ಷೇತ್ರದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ ಎಂದು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರ ಹೇಳಿದರು.
ಕೆ.ಆರ್.ಪೇಟೆ ಹಾಲು ಶಿಥಲೀಕರಣ ಘಟಕದ ಆವರಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಸಹಕಾರಿ ಹಾಗೂ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಆಯೋಜಿಸಿದ್ದ ಡೇರಿ ಕಾರ್ಯದರ್ಶಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಹಾಲು ಉತ್ಪಾದಕರ ಒಕ್ಕೂಟ ರೈತ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಈ ಸಂಸ್ಥೆಗಳು ರೈತರ ಕಲ್ಯಾಣವನ್ನು ಗುರಿ ಇಟ್ಟು ಕೆಲಸ ಮಾಡುತ್ತಿವೆ. ಸಹಕಾರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ರೈತರ ಪ್ರಗತಿಗೆ ಚಿಂತಿಸಬೇಕು. ಡೇರಿ ಕಾರ್ಯದರ್ಶಿಗಳು ಕಾನೂನಿನ ಪರಿಮಿತಿಯಲ್ಲಿ ಕೆಲಸ ಮಾಡಬೇಕು ಎಂದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ, ಸಂಘದ ಕಾರ್ಯದರ್ಶಿಗಳು ಕಾಲಮಿತಿಯಲ್ಲಿ ಸರ್ವ ಸದಸ್ಯರ ಸಭೆ ಕರೆದು ಲೆಕ್ಕ ಪತ್ರ ಮಂಡಿಸಿ ಒಪ್ಪಿಗೆ ಪಡೆಯಬೇಕು. ಒಪ್ಪಿಗೆಯಾದ ನಿರ್ಣಯಗಳ ಅನುಷ್ಟಾನ ಮಾಡಬೇಕು. ಲಾಭದಲ್ಲಿರುವ ಸಹಕಾರ ಸಂಘಗಳು ತಮ್ಮ ಲಾಭಾಂಶದಲ್ಲಿ ಶೇ.2 ರಷ್ಟು ಶಿಕ್ಷಣ ನಿಧಿಯನ್ನು ನೀಡುವುದು ಕಡ್ಡಾಯವಾಗಿದೆ ಎಂದರು.ಸಂಘದ ಚುನಾವಣೆ ವೇಳೆ ಮತದಾನಕ್ಕೆ ಅನರ್ಹರಾದ ಮತದಾರರಿಗೆ 195 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ನೋಟಿಸ್ ನೀಡದಿದ್ದರೆ ಅದು ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದೆ. ಅನರ್ಹ ಮತದಾರರು ನ್ಯಾಯಾಲಯದಲ್ಲಿ ಪ್ರಶ್ನಿಸುವುದರಿಂದ ಚುನಾವಣಾ ಪ್ರಕ್ರಿಯೆಗೆ ಅಡಚಣೆಯಾಗುತ್ತಿದೆ. ಕಾರ್ಯದರ್ಶಿಗಳು ಕಡ್ಡಾಯವಾಗಿ ಸಹಕಾರಿ ಸಂಘದ ನಿಬಂಧನೆಗಳ ಅಡಿಯಲ್ಲಿಯೇ ಕೆಲಸ ಮಾಡಬೇಕು ಎಂದರು.
ಈ ವೇಳೆ ಮನ್ಮುಲ್ ನಿದೇರ್ಶಕ ನಿಂಗೇಗೌಡ, ಸಹಕಾರ ಸಂಘಗಳ ಜಂಟಿ ನಿಬಂಧಕ ಡಿ.ಬಿ.ಲಿಂಗಯ್ಯ, ಉಪ ನಿಬಂಧಕ ವಿಕ್ರಂರಾಜೇ ಅರಸ್, ಸಹಕಾರ ಅಭಿವೃದ್ದಿ ಅಧಿಕಾರಿ ಭರತ್ ಕುಮಾರ್, ಉಪ ವ್ಯವಸ್ಥಾಪಕ ಪ್ರಸಾದ್, ರಾಜಣ್ಣ ಸೇರಿದಂತೆ ಪಟ್ಟಣದ ಹಾಲು ಶಿಥಲೀಕರಣ ಕೇಂದ್ರದ ಮುಖ್ಯಸ್ಥರು ಇದ್ದರು.